ದೌಸಾ (ರಾಜಸ್ಥಾನ):ಮಹಿಳೆಯೊಬ್ಬರ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾರೆ ಎಂದು ನಂಬಲಾಗಿದ್ದ ಮಹಿಳೆ ಮತ್ತೆ ಬದುಕಿ ಬಂದಿದ್ದಾರೆ. ಆದ್ರೆ ಈ ಪ್ರಕರಣದ ತನಿಖೆಯನ್ನು ಆರೋಪಿಗಳೇ ಮಾಡಿದ್ದು ವಿಶೇಷವಾಗಿದ್ದು, ಈಗ ಕೊಲೆ ಆರೋಪಿಗಳಿಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.
ಅಪರಿಚಿತ ಮಹಿಳೆಯ ಶವ ಪತ್ತೆ: ಪೊಲೀಸರ ಪ್ರಕಾರ, ರಾಜಸ್ಥಾನದ ದೌಸಾ ಜಿಲ್ಲೆಯ ಬೈಜುಪಾದ ಪೊಲೀಸ್ ಠಾಣೆ ವ್ಯಾಪ್ತಿಯ ವಿಶಾಲಾ ಗ್ರಾಮದಲ್ಲಿ ಆರತಿ ಎಂಬ ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾರೆ. 2015ರಲ್ಲಿ ಆರತಿ ನಾಪತ್ತೆಯಾಗಿದ್ದರು. ಈ ಮಧ್ಯೆ ವೃಂದಾವನದ ನಾಗ್ಲಾ ಜಿಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಶವವನ್ನು ಗುರುತಿಸಲು ಸಾಧ್ಯವಾಗದ ಕಾರಣ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.
‘ನನ್ನ ಮಗಳನ್ನು ಅವರಿಬ್ಬರು ಕೊಲೆ ಮಾಡಿದ್ದಾರೆ’:ಅಂತ್ಯಕ್ರಿಯೆ ನಡೆಸಿ ಕೆಲವು ದಿನಗಳ ನಂತರ ಆರತಿಯ ತಂದೆ ವೃಂದಾವನ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸಾವನ್ನಪ್ಪಿರುವುದು ನನ್ನ ಮಗಳು ಆರತಿ. ನನ್ನ ಮಗಳು ದೌಸಾದ ಸೋನು ಸೈನಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ. ಬಳಿಕ ಆಕೆಯನ್ನು ಸೈನಿ ಮತ್ತು ಉದಯಪುರದ ನಿವಾಸಿ ಗೋಪಾಲ್ ಸಿಂಗ್ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಆರತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋನು ಸೈನಿ ಮತ್ತು ಆತನ ಸ್ನೇಹಿತ ಗೋಪಾಲ್ ಸಿಂಗ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು.
ಜಾಮೀನಿನ ಮೇಲೆ ಹೊರ ಬಂದ ಆರೋಪಿಗಳಿಂದ ತನಿಖೆ: ಆರೋಪಿ ಸೋನು ಸೈನಿ ಪ್ರಕಾರ, ನಾವು ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ಆರತಿಯನ್ನು ಹುಡುಕಲು ಪ್ರಾರಂಭಿಸಿದ್ದೆವು. ನಾನು ಆರತಿ ತಂಗಿದ್ದ ಹಳ್ಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಭೇಟಿಯಾದೆ. ಆತ ನೀಡಿದ ಮಾಹಿತಿಗಳನ್ನು ಬೆನ್ನತ್ತಿ ಹೋದಾಗ ಆರತಿ ಝಾನ್ಸಿ ಬಳಿಯ ಓರೈ ಎಂಬ ಗ್ರಾಮದಲ್ಲಿ ತಂಗಿದ್ದಾಳೆ ಎಂಬುದು ತಿಳಿಯಿತು ಎಂದು ಕೊಲೆ ಆರೋಪ ಹೊತ್ತ ಸೈನಿ ಹೇಳಿದರು.