ನವದೆಹಲಿ:ಮೂವರ ಹತ್ಯೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು 20 ವರ್ಷಗಳ ಹಿಂದೆ ಮೃತಪಟ್ಟಿದ್ದಾಗಿ ಬಿಂಬಿಸಿ ನಾಪತ್ತೆಯಾಗಿದ್ದ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಪತ್ತೆ ಮಾಡಿ ಮಂಗಳವಾರ ಬಂಧಿಸಿದ್ದಾರೆ. ಬಾಲೇಶ್ಕುಮಾರ್ ಬಂಧಿತ ವ್ಯಕ್ತಿ. ಅಮನ್ ಸಿಂಗ್ ಎಂದು ಹೆಸರು ಬದಲಾಯಿಸಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ ಈತನನ್ನು ಅಪರಾಧ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.
ಪ್ರಕರಣದ ಹಿನ್ನೆಲೆ:2004ರಲ್ಲಿ ದೆಹಲಿಯ ಬವಾನಾ ಪ್ರದೇಶದ ನಿವಾಸಿಯಾಗಿದ್ದ ಬಾಲೇಶ್ಕುಮಾರ್ ಆಲಿಯಾಸ್ ಅಮನ್ಸಿಂಗ್ ಹಣದ ವಿಚಾರವಾಗಿ ತನ್ನ ಸಂಬಂಧಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ. ಮೃತ ವ್ಯಕ್ತಿಯ ಪತ್ನಿಯ ಜೊತೆಗೂ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೂಡ ಈತನ ಮೇಲಿದೆ.
ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಾಲೇಶ್ ಸಹೋದರ ಸುಂದರ್ಲಾಲ್ನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಲೇಶ್ ರಾಜಸ್ಥಾನಕ್ಕೆ ಟ್ರಕ್ನಲ್ಲಿ ಪರಾರಿಯಾಗಿದ್ದ. ಈ ವೇಳೆ ತಾನಿದ್ದ ಟ್ರಕ್‌ಗೇ ಬೆಂಕಿ ಹಚ್ಚಿದ್ದ. ಈತನ ಜೊತೆಗೆ ಇದ್ದ ಇಬ್ಬರು ಕೆಲಸಗಾರರು ದುರಂತದಲ್ಲಿ ಸುಟ್ಟು ಹೋಗಿ ಪ್ರಾಣ ಕಳೆದುಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ರಾಜಸ್ಥಾನ ಪೊಲೀಸರಿಗೆ ಮೃತ ಇಬ್ಬರಲ್ಲಿ ಬಾಲೇಶ್ ಕೂಡ ಇದ್ದಾನೆ ಎಂದು ಕುಟುಂಬಸ್ಥರು ಸುಳ್ಳು ಹೇಳಿದ್ದರು. ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ರಾಜಸ್ಥಾನ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.
ಹೆಸರು ಬದಲಿಸಿ ನಕಲಿ ದಾಖಲೆ ಸೃಷ್ಟಿ:ಬೆಂಕಿ ಅನಾಹುತದಲ್ಲಿ ಸಾವನ್ನಪ್ಪಿದ್ದಾಗಿ ಬಿಂಬಿಸಿದ ಬಾಲೇಶ್ ಪಂಜಾಬ್‌ಗೆ ಪರಾರಿಯಾಗಿದ್ದ. ಬಳಿಕ ತನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದ್ದ. ತನ್ನ ಹೆಸರು ಬದಲಿಸಿಕೊಂಡು, ಅದರಲ್ಲಿ ನಕಲಿ ಗುರುತಿನ ದಾಖಲೆಗಳನ್ನು ಸಂಗ್ರಹಿಸಿದ್ದ. ಆತನ ಹೆಸರನ್ನು ಅಮನ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದ.