ಕಂಚಿಕಚರ್ಲಾ (ಆಂಧ್ರಪ್ರದೇಶ): ದಲಿತ ಯುವಕನೊಬ್ಬನ ಮೇಲೆ ಮೇಲ್ಜಾತಿ ಯುವಕರು ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ಬುಧವಾರ ವರದಿಯಾಗಿದೆ. ಈ ಬಗ್ಗೆ ಕಂಚಿಕಚರ್ಲಾ ಪ್ರದೇಶದ ನಿವಾಸಿಯಾದ ಸಂತ್ರಸ್ತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬುಧವಾರ ರಾತ್ರಿ 8:30ರ ಸುಮಾರಿಗೆ ಯಾರೋ ಕರೆ ಮಾಡಿ ಶಿವಸಾಯಿ ಕ್ಷೇತ್ರದ ಬಳಿ ಜಗಳ ನಡೆಯುತ್ತಿದ್ದು, ಸ್ಥಳಕ್ಕೆ ಬರುವಂತೆ ಹೇಳಿದರು. ಹೀಗಾಗಿ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಸ್ಥಳಕ್ಕೆ ತೆರಳಿದ್ದೆ. ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಆರು ಜನ ದುಷ್ಕರ್ಮಿಗಳು ನನ್ನನ್ನು ತಮ್ಮ ಕಾರಿಗೆ ಬಲವಂತವಾಗಿ ಹತ್ತಿಸಿಕೊಂಡು ಗುಂಟೂರು ಜಿಲ್ಲೆ ಕಡೆಗೆ ಕರೆದೊಯ್ದರು. ನಂತರ ಗಂಟೆಗಳ ಕಾಲ ತೀವ್ರವಾಗಿ ಥಳಿಸಿದರು. ಬಾಯಾರಿಕೆಯಾಗಿದೆ, ನೀರು ಬೇಕು ಎಂದಾಗ ಆರೋಪಿಗಳು ಕಾರು ನಿಲ್ಲಿಸಿ, ನನ್ನನ್ನು ಹೊರ ತಂದು ನಡುರಸ್ತೆಯಲ್ಲಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೂತ್ರ ವಿಸರ್ಜನೆ ಪ್ರಕರಣ: ಸಂತ್ರಸ್ತ ವ್ಯಕ್ತಿಯ ಪಾದ ತೊಳೆದು, ಕ್ಷಮೆ ಕೇಳಿದ ಮಧ್ಯಪ್ರದೇಶ ಸಿಎಂ: ವಿಡಿಯೋ
ಅಲ್ಲದೇ, ಆರೋಪಿಗಳು ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ಈ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಜೊತೆಗೆ ನನ್ನ ಚಿನ್ನದ ಸರ ಮತ್ತು 7 ಸಾವಿರ ರೂ. ನಗದು ದೋಚಿದ್ದಾರೆ. ನಂತರ ಗುಂಟೂರು ಟೋಲ್‌ಗೇಟ್ ಬಳಿ ಕಾರಿನಲ್ಲಿ ನನ್ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ನಾನು ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಇದರಿಂದ ಆತ ಕಾರು ಚಲಾಯಿಸಿಕೊಂಡು ವಿಜಯವಾಡ ಬಸ್ ನಿಲ್ದಾಣಕ್ಕೆ ತಲುಪಿದ ಎಂದು ದೂರಿನಲ್ಲಿ ವಿವರಿಸಿದ್ದಾರೆ.