ನವದೆಹಲಿ: ನೈಋತ್ಯ ದೆಹಲಿಯ ದಾಬ್ರಿ ಪ್ರದೇಶದಲ್ಲಿ ಗುರುವಾರ 42 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಮನೆಯ ಬಳಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆರೋಪಿಯನ್ನು ಬೆನ್ನತ್ತಿದ್ದ ಪೊಲೀಸರಿಗೆ ಆತನೇ ಶವವಾಗಿ ಪತ್ತೆಯಾಗಿದ್ದಾನೆ.
ಪ್ರಕರಣ ವೈಯಕ್ತಿಕ ವಿವಾದಕ್ಕೆ ಸಂಬಂಧಿಸಿದ್ದು ಎಂದು ಅಂದಾಜಿಸಿದ್ದ ಪೊಲೀಸರು ಮೊದಲೇ ಶಂಕಿತ ಯಾರೆಂದು ಗುರುತಿಸಿದ್ದರು. ಇದೇ ಮಾಹಿತಿ ಆಧರಿಸಿ ಆತನ ಮನೆಗೆ ಹೋದಾಗ ಆರೋಪಿಯ ಮೃತದೇಹ ಮನೆಯ ಮಹಡಿಯಲ್ಲಿ ಬಿದ್ದಿತ್ತು. ಆತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ವಯಸ್ಸು 42 ವರ್ಷವಾಗಿದ್ದು, ಆರೋಪಿಯನ್ನು 23 ವರ್ಷದ ಆಶಿಶ್ ಎಂದು ಗುರುತಿಸಲಾಗಿದೆ. ಹರಿನಗರದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಇಬ್ಬರ ಶವಗಳ ಮರಣೋತ್ತರ ಪರೀಕ್ಷೆ ನಡೆದಿದೆ.
ದ್ವಾರಕಾ ಡಿಸಿಪಿ ಎಂ.ಹರ್ಷವರ್ಧನ್ ಪ್ರತಿಕ್ರಿಯಿಸಿ, ಇಬ್ಬರ ನಡುವೆ ತುಂಬಾ ಹಳೆಯ ಸ್ನೇಹವಿತ್ತು. ಜಿಮ್‌ನಲ್ಲಿ ಪರಸ್ಪರ ಭೇಟಿಯಾಗಿದ್ದು, ಒಟ್ಟಿಗೆ ಜಿಮ್‌ಗೆ ಹೋಗುತ್ತಿದ್ದರು. ಆರೋಪಿಯು ಕಾಲ್ನಡಿಗೆಯಲ್ಲಿಯೇ ಮಹಿಳೆಯ ಮನೆಗೆ ತಲುಪಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಮನೆಗೆ ತೆರಳಿ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಮೊದಲು ಮಹಿಳೆಗೆ ಕರೆ ಮಾಡಿ ಮನೆಯ ಹೊರಗೆ ಕರೆದು ಯಾವುದೋ ವಿಷಯ ಮಾತನಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಗ ಅವರಲ್ಲಿ ಮನಸ್ತಾಪ ಉಂಟಾಗಿದ್ದು ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಇದುವರೆಗೂ ಪೊಲೀಸರಿಗೆ ಯುವಕನಿಂದ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಘಟನೆಗೆ ಬಳಸಿದ್ದ ಬಂದೂಕು ಮತ್ತು ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಮಾಹಿತಿ ಪ್ರಕಾರ ಮೃತ ಮಹಿಳೆಯ ಪತಿಗೆ ಆಸ್ತಿ ವ್ಯವಹಾರವಿದೆ. ಅವರು ತಮ್ಮ ಕುಟುಂಬದೊಂದಿಗೆ ವೈಶಾಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಮತ್ತೊಂದೆಡೆ, ಆಶಿಶ್ ಕೂಡ ತನ್ನ ತಾಯಿ ಮತ್ತು ತಂದೆಯೊಂದಿಗೆ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ದಾಬ್ರಿ ಪ್ರದೇಶದಲ್ಲಿ ಮಹಿಳೆಗೆ ಗುಂಡು ಹಾರಿಸಲಾಗಿದೆ ಎಂಬ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕಾಗಮಿಸಿದಾಗ, ಮನೆಯ ಹೊರಗೆ ಸಾಕಷ್ಟು ರಕ್ತ ಮತ್ತು ರಕ್ತದ ಕಲೆಯುಳ್ಳ ಕಾರ್ಟ್ರಿಡ್ಜ್ ಶೆಲ್ ಪತ್ತೆಯಾಗಿದೆ. ಕೂಡಲೇ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ ಕೆಲ ಮಾಹಿತಿ ಪಡೆದ ಪೊಲೀಸರು ತಕ್ಷಣ ಆಶಿಶ್ ಮನೆಗೆ ತಲುಪಿದ್ದಾರೆ. ಆಶಿಶ್ ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರ ದೂರವಾಣಿ ಕರೆ ವಿವರಗಳನ್ನು ಪರಿಶೀಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇಬ್ಬರ ನಡುವಿನ ಪ್ರೇಮ ಸಂಬಂಧದ ವಿಷಯ ದೃಢಪಟ್ಟಿಲ್ಲ.
ಇದನ್ನೂ ಓದಿ:ಜೈಲಿನಿಂದ ಹೊರಬಂದ ಹತ್ತೇ ದಿನದಲ್ಲಿ 6 ಜನರಿಗೆ ಚಾಕುವಿನಿಂದ ಇರಿದ ರೌಡಿಶೀಟರ್!