ಮಹಾರಾಜ್‌ಗಂಜ್ (ಉತ್ತರ ಪ್ರದೇಶ): ಹಸು ಕಳ್ಳಸಾಗಣೆದಾರರ ಮೇಲೆ ಉತ್ತರ ಪ್ರದೇಶ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಇದರ ಹೊರತಾಗಿಯು ರಾಜ್ಯದಲ್ಲಿ ಗೋವು ಕಳ್ಳಸಾಗಣೆ ಎಗ್ಗಿಲ್ಲ ನಡೆಯುತ್ತಿದೆ. ಸೋಮವಾರ ಮಹಾರಾಜ್‌ಗಂಜ್ ನಗರದಲ್ಲಿ ಪೊಲೀಸರು ಮತ್ತು ಗೋವು ಕಳ್ಳಸಾಗಣೆದಾರರ ನಡುವೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಕಳ್ಳಸಾಗಣೆದಾರರು ಬಿಹಾರದ ಮೂಲದವರು ಎಂಬುದು ತಿಳಿದಿದೆ.
ಮೂವರೂ ಹಸು ಕಳ್ಳಸಾಗಣೆದಾರರ ಬಂಧನ: ಮಹಾರಾಜಗಂಜ್ ನಗರದಲ್ಲಿ ಸೋಮವಾರ ರಾತ್ರಿ 9.30ಕ್ಕೆ ಇಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ತಂಡದಲ್ಲಿ ಎಸ್‌ಒಜಿ ಉಸ್ತುವಾರಿ ಮಹೇಂದ್ರ ಯಾದವ್, ಸ್ವಾಟ್ ತಂಡದ ಉಸ್ತುವಾರಿ ಯೋಗೇಶ್ ಸಿಂಗ್, ಕಣ್ಗಾವಲು ಕೋಶದ ಉಸ್ತುವಾರಿ ಉಮೇಶ್ ಯಾದವ್, ಶೈಲೇಂದ್ರ ತ್ರಿಪಾಠಿ ಇದ್ದರು. ಅಷ್ಟರಲ್ಲಿ ಪಿಕಪ್ ವಾಹನ ಬರುತ್ತಿರುವುದನ್ನು ಕಂಡ ತಂಡ ನಿಲ್ಲಿಸುವಂತೆ ಸೂಚಿಸಿತು.
ಕಳ್ಳಸಾಗಾಣಿಕೆದಾರರು ವಾಹನವನ್ನು ಜೋರಾಗಿ ಓಡಿಸಲು ಪ್ರಾರಂಭಿಸಿದರು. ಜೊತೆಗೆ ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಈ ವೇಳೆ ಕಳ್ಳಸಾಗಾಣಿಕೆದಾರರ ವಾಹನ ರಸ್ತೆ ಬದಿಯ ಚರಂಡಿಯಲ್ಲಿ ಸಿಲುಕಿಕೊಂಡಿದೆ. ಕಾರಿನಿಂದ ಕೆಳಗಿಳಿದ ಬಳಿಕ ಮೂವರು ಕಳ್ಳಸಾಗಣೆದಾರರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸ್ ತಂಡ ಮುತ್ತಿಗೆ ಹಾಕಿ ಈ ಮೂವರು ಗೋವು ಕಳ್ಳಸಾಗಣೆದಾರರನ್ನು ಬಂಧಿಸಿದೆ. ಈ ವೇಳೆ ಅಲ್ಲಿಗೆ ಆಗಮಿಸಿದ ಗುಂಪೊಂದು ಹಸು ಕಳ್ಳಸಾಗಣೆದಾರರ ವಾಹನವನ್ನು ಜಖಂಗೊಳಿಸಿದೆ.