ಬಿಹಾರ: ಬಂಕಾ ಜಿಲ್ಲೆಯ ಅಮರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಭಂಗಮ ಗ್ರಾಮದಲ್ಲಿ ಮಾವಿನ ಕಾಯಿ ಕೀಳುತ್ತಿದ್ದ ಬಾಲಕನನ್ನು ಹೊಡೆದು ಕೊಂದ ಅಮಾನವೀಯ ಘಟನೆ ಜರುಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಮೃತದೇಹವನ್ನು ಗುರುವಾರ ಸಂಜೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಸಂಬಂಧಿಕರು ಮತ್ತು ಗ್ರಾಮಸ್ಥರು ಅಮರಪುರ - ಬಂಕ ಮುಖ್ಯ ರಸ್ತೆಯಲ್ಲಿ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ, ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು.
ಆರೋಪಿಗಳ ಬಂಧನಕ್ಕೆ ಆಗ್ರಹ : ಟ್ರಾಫಿಕ್ ಜಾಮ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಖುರ್ಷಿದ್ ಆಲಂ ಅವರು ಪ್ರತಿಭಟನಾಕಾರರ ಮನವೊಲಿಸಿ, ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು. ಸುಮಾರು ಒಂದು ಗಂಟೆಯ ನಂತರ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಇದನ್ನೂ ಓದಿ :Mysore crime: ಪತ್ನಿಯ ಶೀಲ ಶಂಕಿಸಿ ಹತ್ಯೆ.. ಬಳಿಕ ತಾನೇ ಪೊಲೀಸರಿಗೆ ಶರಣಾದ ಪತಿ
"ನನಗೆ ಇಬ್ಬರು ಗಂಡು ಮತ್ತು ಒಬ್ಬಳು ಮಗಳು. ಕಿರಿಯ ಮಗ ಬಾಸುಕಿ ಕುಮಾರ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ. ನಿತೇಶ್ ಕುಮಾರ್ ಎಂಬುವರ ತೋಟಕ್ಕೆ ಮಾವು ಕೀಳಲು ಹೋದಾಗ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ, ನಾವು ಅವನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊದಲು ಚಿಕಿತ್ಸೆಗಾಗಿ ಅಮರಪುರ ನಗರದ ರೆಫರಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ನಂತರ ಮಾಯಾಗಂಜ್ ಭಾಗಲ್ಪುರಕ್ಕೆ ಕಳುಹಿಸಿದರು. ಮಾಯಗಂಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಗುರುವಾರ ಮೃತಪಟ್ಟಿದ್ದಾನೆ" ಎಂದು ಬಾಲಕನ ತಾಯಿ ತಿಳಿಸಿದ್ದಾರೆ.