ತಿರುವನಂತಪುರಂ:ವಧುವಿನ ತಂದೆಯನ್ನು ಮದುವೆಯ ದಿನವೇ ಹತ್ಯೆ ಮಾಡಿರುವ ಘಟನೆ ಕೇರಳ ರಾಜ್ಯದ ವರ್ಕಲಾ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ವಡಸ್ಸೆರಿಕೋಣಂನಲ್ಲಿ ರಾಜು (61) ಎಂಬುವರನ್ನು ಕೊಲೆ ಮಾಡಲಾಗಿದೆ. ರಾಜು ಅವರ ಪುತ್ರಿ ಶ್ರೀಲಕ್ಷ್ಮಿ ಇಂದು ಹಸೆ ಮಣೆ ಏರಬೇಕಿತ್ತು.
ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು, ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸಂಭ್ರಮದ ಸಮಯದಲ್ಲಿ ವಿಷಾದಕರ ಘಟನೆ ಜರುಗಿದೆ. ಹುಡುಗಿಯ ಮಾಜಿ ಗೆಳೆಯ ಮತ್ತು ಅವನ ಸ್ನೇಹಿತರು, ಇಂದು ಮುಂಜಾನೆ ರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರು ಸೇರಿ ನಡೆಸಿದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ರಾಜು ಮೃತಪಟ್ಟಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ವಟಸ್ಸೆರಿಕೋಣಂನ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ವಿವರ: ನಿನ್ನೆ ವಧುವಿನ ಮನೆಯಲ್ಲಿ ಭರ್ಜರಿಯಾದ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಭೀಭತ್ಸಕರ ಘಟನೆ ನಡೆದಿದೆ. ವಡಸ್ಸೆರಿಕೋಣಂ ಮೂಲದವರಾದ ಜಿಷ್ಣು, ಜಿಜಿನ್, ಶ್ಯಾಮ್ ಮತ್ತು ಮನು ಎಂಬುವವರು ನಡುರಾತ್ರಿ ಒಂದು ಗಂಟೆ ಸುಮಾರಿಗೆ ವಧುವಿನ ಮನೆಗೆ ಆಗಮಿಸಿ, ತಮ್ಮ ಕಾರಿನಲ್ಲಿ ಜೋರಾಗಿ ಸಂಗೀತದ ಸೌಂಡ್ ಇಡುವ ಮೂಲಕ ಗಲಾಟೆ ಮಾಡಿದ್ದಾರೆ. ಈ ನಾಲ್ವರು ಸ್ನೇಹಿತರ ಇಂತಹ ಕೃತ್ಯವನ್ನು ವಧುವಿನ ತಂದೆ ರಾಜು ಪ್ರಶ್ನಿಸಿದ್ದಾರೆ. ಇದರಿಂದಾಗಿ ರಾಜು ಮತ್ತು ಮಗಳ ಮಾಜಿ ಸ್ಮೇಹಿತ ಹಾಗೂ ಅವರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ರಾಜುವಿನ ಕೊಲೆಯಲ್ಲಿ ಅಂತ್ಯವಾಗಿದೆ.