ನವದೆಹಲಿ:ಇಸ್ರೇಲ್ ಮೇಲಿನ ದಾಳಿಯನ್ನು ಭಾನುವಾರವಷ್ಟೇ ಖಂಡಿಸಿದ್ದ ಕಾಂಗ್ರೆಸ್, ಸೋಮವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡಿ ನಿರ್ಣಯಗಳನ್ನು ಅಂಗೀಕರಿಸಿದೆ. ಅಲ್ಲಿನ ಜನರು ತಮ್ಮ ಭೂಮಿಯ ರಕ್ಷಣೆ ಮಾಡಿಕೊಳ್ಳುವ ಹಾಗೂ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂದು ತನ್ನ ಹಿಂದಿನ ನಿಲುವಿನಂತೆ ಬೆಂಬಲ ಘೋಷಿಸಿದೆ.
ಕಳೆದೆರಡು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಮಧ್ಯಪ್ರಾಚ್ಯ ಸಂಘರ್ಷ ಕಾರಣವಾಗಿದೆ. ಈ ಯುದ್ಧದ ಬಗ್ಗೆ ಸಿಡಬ್ಲ್ಯೂಸಿ ತೀವ್ರ ಆತಂಕ ಮತ್ತು ನಿರಾಶೆ ವ್ಯಕ್ತಪಡಿಸಿದೆ. ಇಸ್ರೇಲ್‌ನಂತೆಯೇ ಪ್ಯಾಲೆಸ್ಟೀನೀಯನ್ನರು ತಮ್ಮ ಭೂಮಿಯ ರಕ್ಷಣೆ, ತಮ್ಮದೇ ಸರ್ಕಾರ ಮತ್ತು ಘನತೆಯಿಂದ ಬದುಕುವ ಹಕ್ಕು ಹೊಂದಿದ್ದಾರೆ. ಕದನ ವಿರಾಮ ಘೋಷಿಸಿ, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ.
ನಿನ್ನೆಯಷ್ಟೇ ಇಸ್ರೇಲ್ ಮೇಲಿನ ದಾಳಿಗೆ ಖಂಡನೆ:ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಯನ್ನು ಕಾಂಗ್ರೆಸ್ ಭಾನುವಾರಷ್ಟೇ ಖಂಡಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ರಕ್ಷಣೆಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂಸಾಚಾರವು ಎಂದಿಗೂ ಪರಿಹಾರ ನೀಡುವುದಿಲ್ಲ. ಅದುವೇ ಪ್ರಮುಖ ಅಸ್ತ್ರವಾಗಬಾರದು ಎಂದು ಕಾಂಗ್ರೆಸ್ ಹೇಳಿದೆ.
"ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳನ್ನು ಖಾತ್ರಿಪಡಿಸುವ ಮೂಲಕ, ಪ್ಯಾಲೆಸ್ಟೀನಿಯನ್ನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ತಮ್ಮ ಪಕ್ಷದ ನಿಲುವು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಭಾನುವಾರ ಪೋಸ್ಟ್ ಹಂಚಿಕೊಂಡಿದ್ದರು.