ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ ದುರ್ಬಲ ವ್ಯಕ್ತಿ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಕ್ಕೆ ಬಹುತೇಕ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ, ಯಾವುದೋ ಒಂದು ಅಜೆಂಡಾ ಇಟ್ಟುಕೊಂಡಿರುವ ಮಾಧ್ಯಮಗಳಿಗಾಗಿ ನಾವು ಬರಾಕ್ ಒಬಾಮಾ ಪುಸ್ತಕದಲ್ಲಿರುವ ಅಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಈ ಮೊದಲು ಓರ್ವ ನಾಯಕನನ್ನು ಜನರು ಮತ್ತು ಕೆಲವು ಏಜೆನ್ಸಿಗಳು 'ಸೈಕೋಪಾತ್' ಮತ್ತು 'ಮಾಸ್ಟರ್ ಡಿವೈಡರ್' ಎಂದು ಕರೆದಿದ್ದವು. ಇಂತಹ ಹೇಳಿಕೆಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ಉದಿತ್ ರಾಜ್, ''ಒಬಾಮಾ ಅವರೇ, 5ರಿಂದ 10 ನಿಮಿಷ ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ವ್ಯಕ್ತಿಯ ವ್ಯಕ್ತಿತ್ವ ತಿಳಿಯಬೇಕಾದರೆ ಕೆಲವೊಮ್ಮೆ ವರ್ಷಗಳೇ ಬೇಕಾಗುತ್ತವೆ. ರಾಹುಲ್ ಗಾಂಧಿಯನ್ನು ನೀವು ತಪ್ಪಾಗಿ ಅಥೈಸಿಕೊಂಡಿದ್ದೀರಿ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಅರ್ಚನಾ ದಾಲ್ಮಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಒಬಾಮಾ ಅವರ ತೀರ್ಪು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯನ್ನು ದೇವರೆಂದು ಪರಿಗಣಿಸಿರುವ ಕೋಟ್ಯಂತರ ಮಂದಿಯ ಭಾವನೆಗಳಿಗೆ ಬರಾಕ್ ಒಬಾಮಾ ನೋವುಂಟು ಮಾಡಿದ್ದಾರೆ ಎಂದಿರುವ ಆಚಾರ್ಯ ಪ್ರಮೋದ್ ಕೃಷ್ಣನ್, ಒಬಾಮಾ ಅವರನ್ನು ಅಂಧ್ ಭಕ್ತ್ ಎಂದು ಜರಿದಿದ್ದಾರೆ.