ಮುಜಾಫರ್‌ಪುರ :ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ವಕೀಲ ಸುನಿಲ್ ಕುಮಾರ್ ಓಜಾ ಅವರು ಮುಜಾಫರ್‌ಪುರ ಸಿವಿಲ್ ನ್ಯಾಯಾಲಯದಲ್ಲಿ ಉದಯನಿಧಿ ವಿರುದ್ಧ ದೂರು ದಾಖಲಿಸಿದ್ದಾರೆ. ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ದೇಶಾದ್ಯಂತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
''ಉದಯನಿಧಿ ಅವರ ಈ ಹೇಳಿಕೆಯು ಹಿಂದೂ ಮತ್ತು ಸನಾತನ ಧರ್ಮದಲ್ಲಿ ನಂಬಿಕೆಯಿರುವ ದೇಶದ ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಆರೋಪಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯಾಲಯ ದೂರು ಸ್ವೀಕರಿಸಿದೆ. ನ್ಯಾಯಾಲಯವು ಈ ವಿಷಯವನ್ನು ಸೆಪ್ಟೆಂಬರ್ 14 ರಂದು ವಿಚಾರಣೆ ನಡೆಸಲಿದೆ'' ಎಂದು ವಕೀಲ ಸುನಿಲ್ ಕುಮಾರ್ ಓಜಾ ತಿಳಿಸಿದ್ದಾರೆ.
ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ದೂರು ದಾಖಲು : ಉದಯನಿಧಿಯ ಈ ವಿವಾದಾತ್ಮಕ ಹೇಳಿಕೆ ಬಳಿಕ ಇಡೀ ದೇಶದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಈ ಮಧ್ಯೆ, ಮುಜಾಫರ್‌ಪುರದ ವಕೀಲ ಸುಧೀರ್ ಕುಮಾರ್ ಓಜಾ ಅವರು ಸಿವಿಲ್ ನ್ಯಾಯಾಲಯದಲ್ಲಿ ಉದಯನಿಧಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಯೋಜಿತ ಷಡ್ಯಂತ್ರದ ಭಾಗವಾಗಿ, ಉದಯನಿಧಿ ಅವರು ಸೆಪ್ಟೆಂಬರ್ 2 ರಂದು ಚೆನ್ನೈನಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸುದ್ದಿ ಟಿವಿ ಚಾನೆಲ್‌ಗಳು ಮತ್ತು ಇತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.