ನವದೆಹಲಿ : ಛತ್ತೀಸ್‌ಗಢದಲ್ಲಿ ನಡೆದ ಕಲ್ಲಿದ್ದಲು ಲೆವಿ ಸುಲಿಗೆ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಂಗ್ರೆಸ್ ಶಾಸಕರು, ಓರ್ವ ಐಎಎಸ್ ಅಧಿಕಾರಿ ಮತ್ತು ಇತರರಿಗೆ ಸೇರಿದ 51.40 ಕೋಟಿ ರೂಪಾಯಿ ಮೌಲ್ಯದ 90 ಸ್ಥಿರಾಸ್ತಿಗಳನ್ನು ಮೇ 9 ರಂದು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ ಎಂದು ಏಜೆನ್ಸಿ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಇಡಿ, ಶಾಸಕರಾದ ದೇವೆಂದರ್ ಯಾದವ್ ಮತ್ತು ಚಂದ್ರದೇವ ಪ್ರಸಾದ್ ರೈ, IAS ಅಧಿಕಾರಿ ರಾನು ಸಾಹು, ಉದ್ಯಮಿ ಮತ್ತು "ಕಿಂಗ್‌ಪಿನ್" ಸೂರ್ಯಕಾಂತ್ ತಿವಾರಿ, R. P. ಸಿಂಗ್, ವಿನೋದ್ ತಿವಾರಿ ಮತ್ತು ರಾಮ್ ಗೋಪಾಲ್ ಅಗರ್ವಾಲ್ ಅವರಿಗೆ ಸಂಬಂಧಿಸಿದ ಆಸ್ತಿಗಳು, ನಗದು, ಐಷಾರಾಮಿ ವಾಹನಗಳು, ಆಭರಣಗಳನ್ನು ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ತಿವಾರಿ ಅವರೊಂದಿಗೆ ಇತರ ವ್ಯಕ್ತಿಗಳ ಆರ್ಥಿಕ ಸಂಪರ್ಕಗಳ ನೇರ ಪುರಾವೆಗಳಿವೆ ಎಂದು ಸಂಸ್ಥೆ ಆರೋಪಿಸಿದೆ. ಈ ಹಿಂದೆ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್, ಛತ್ತೀಸ್‌ಗಢದ ನಾಗರಿಕ ಸೇವಾ ಅಧಿಕಾರಿ ಸೌಮ್ಯ ಚೌರಾಸಿಯಾ, ಉದ್ಯಮಿ ಸುನಿಲ್ ಅಗರವಾಲ್ ಮತ್ತು ಇತರರಿಗೆ ಸಂಬಂಧಿಸಿದ 170 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಆದಾಯ ತೆರಿಗೆ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ 145 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮನಿ ಲಾಂಡರಿಂಗ್ ತನಿಖೆ ನಡೆಸಲಾಗಿದೆ ಮತ್ತು ಇಡಿ ಒಂಬತ್ತು ಜನರನ್ನು ಬಂಧಿಸಿದೆ. ಬಂಧಿತ ಆರೋಪಿಗಳೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ.
ಸುಲಿಗೆ ಪ್ರಕರಣದಲ್ಲಿ 540 ಕೋಟಿ ರೂಪಾಯಿಗಳಷ್ಟು ಕ್ರಿಮಿನಲ್ ವ್ಯವಹಾರ ನಡೆದಿರುವ ಬಗ್ಗೆ ಇಡಿ ಪತ್ತೆ ಮಾಡಿದೆ. ಪ್ರಕರಣದಲ್ಲಿ ಛತ್ತೀಸಗಢದ ಕಲ್ಲಿದ್ದಲು ಖರೀದಿದಾರರು ಮತ್ತು ಸಾಗಾಟಗಾರರನ್ನು ಗುರಿಯಾಗಿಸಿ ಅವರಿಂದ ವಸೂಲಿ ಮಾಡಲಾಗಿದೆ ಎಂದು ಇಡಿ ಹೇಳಿದೆ. ಜನವರಿಯಲ್ಲಿ ಇಡಿ ದೀಪೇಶ್ ತೌಂಕ್, ಸಂದೀಪ್ ಕುಮಾರ್ ನಾಯಕ್, ಶಿವಶಂಕರ್ ನಾಗ್ ಮತ್ತು ರಾಜೇಶ್ ಚೌಧರಿ ಅವರನ್ನು ಬಂಧಿಸಿತ್ತು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಚೌರಾಸಿಯಾ ಅವರಿಗೆ ತೌಂಕ್ ನಿಕಟವರ್ತಿಯಾಗಿದ್ದರು ಎಂದು ಅದು ಆರೋಪಿಸಿದೆ. ನಾಯಕ್ ಮತ್ತು ನಾಗ್ ಅವರು ಗಣಿಗಾರಿಕೆ ಅಧಿಕಾರಿಗಳಾಗಿದ್ದು, ಅವರು ತಿವಾರಿಗೆ ಸಹಾಯ ಮಾಡಿದ್ದರು ಎನ್ನಲಾಗಿದೆ.