ಗಾಂಧಿನಗರ( ಗುಜರಾತ್):ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ 156 ಸ್ಥಾನಗಳನ್ನು ಗೆದ್ದಿದೆ. ಡಿಸೆಂಬರ್ 12 ರಂದು ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ನಿಯಮದ ಪ್ರಕಾರ ಸಿಎಂ ಭೂಪೇಂದ್ರ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಕಮಲಂನಲ್ಲಿ ಬಿಜೆಪಿಯ ವಿಜಯಶಾಲಿ ಶಾಸಕರ ಸಭೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಔಪಚಾರಿಕವಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದು, ಬಳಿಕ ಸರ್ಕಾರ ರಚನೆಗಾಗಿ ರಾಜ್ಯಪಾಲರನ್ನು ಭೇಟಿ ಮಾಡಲು ತೆರಳಬಹುದು ಎಂದು ಮೂಲಗಳಿಂದ ಗೊತ್ತಾಗಿದೆ.
ಬಿಜೆಪಿಗೆ ಸುಲಭ ಗೆಲುವು: ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇತ್ತು. ಆದರೆ, ಬಿಜೆಪಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಮಾಧವ್ ಸಿನ್ಹಾ ಸೋಲಂಕಿ ಅವರ 149 ಸ್ಥಾನಗಳ ದಾಖಲೆಯೂ ಮುರಿದಿದೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಡಬಲ್ ಸಂತೋಷವಿದೆ.
ಬಿಜೆಪಿಯಲ್ಲಿ ಗೆಲುವಿನ ಸಂತಸ: 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156, ಕಾಂಗ್ರೆಸ್ 17 ಮತ್ತು ಆಮ್ ಆದ್ಮಿ ಪಕ್ಷ 5 ಸ್ಥಾನಗಳನ್ನು ಪಡೆದುಕೊಂಡಿದೆ. ಇದರೊಂದಿಗೆ 2017ರಲ್ಲಿ 77 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 17 ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಈ ಗೆಲುವಿನೊಂದಿಗೆ ಬಿಜೆಪಿ ಗೆಲುವಿನ ಸಂತಸ ಏಳನೇ ಸ್ವರ್ಗಕ್ಕೆ ತಲುಪಿದೆ.
ಇದನ್ನು ಓದಿ:ಗುಜರಾತ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆ: ಅಹಮದಾಬಾದ್ ತಲುಪಿದ ಬಿಎಸ್ವೈಗೆ ಬಿಗಿ ಭದ್ರತೆ