ಮುಜಾಫರ್ಪುರ್ (ಬಿಹಾರ) : ಸ್ಲಂವೊಂದರ ಮನೆಯಲ್ಲಿ ತಡರಾತ್ರಿ ಉಂಟಾದ ಬೆಂಕಿ ಅವಘಡದಲ್ಲಿ ಮೂರು ವರ್ಷದ ಮಗು ಸೇರಿ ನಾಲ್ವರು ಬಾಲಕಿಯರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸೋನಿ (12), ಶಿವಾನಿ (8), ಅಮೃತಾ (5) ಮತ್ತು ರೀಟಾ (3) ಎಂದು ಗುರುತಿಸಲಾಗಿದೆ. ಜೊತೆಗೆ ಈ ದುರ್ಘಟನೆಯಲ್ಲಿ ಸುಮಾರು ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಇಲ್ಲಿನ ರಾಮದಯಾಲು ಪ್ರದೇಶದ ಸ್ಲಂನಲ್ಲಿ ನರೇಶ್ ರಾಮ್ ಎಂಬವರ ಮನೆಯಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೆಂಕಿ ಮನೆ ತುಂಬಾ ವ್ಯಾಪಿಸಿದ್ದು, ಸುತ್ತಮುತ್ತಲಿನ ಇನ್ನೆರಡೂ ಮನೆಗಳಿಗೂ ಹಬ್ಬಿದೆ. ಪರಿಣಾಮ ಸುಮಾರು ಹತ್ತು ಮಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರಿಗೂ ಕೂಡ ಬೆಂಕಿ ತಗುಲಿದೆ. ತಕ್ಷಣ ಇವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನುಳಿದ 6 ಮಂದಿ ಗಾಯಾಳುಗಳನ್ನು ಇಲ್ಲಿನ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡ ಹೇಗೆ ಉಂಟಾಯಿತು ಎಂಬ ಬಗ್ಗೆ ತಿಳಿದುಬಂದಿಲ್ಲ.
ಹೊರಬರಲಾಗದೇ ಕಮರಿದ ಹೋದ ಜೀವಗಳು :ತಡರಾತ್ರಿ ಬೆಂಕಿ ಅವಘಡ ಉಂಟಾಗಿದ್ದರಿಂದಮನೆಯಲ್ಲಿ ಮಲಗಿದ್ದವರು ಬೆಚ್ಚಿಬಿದ್ದಿದ್ದಾರೆ. ಈ ವೇಳೆ, ಮನೆಯಿಂದ ಹೊರಗಡೆ ಬರಲಾಗದೇ ಒಳಗಡೆ ಸಿಲುಕಿಕೊಂಡಿದ್ದಾರೆ. ಇದರ ಪರಿಣಾಮ ಮನೆಯಲ್ಲೇ ಬೆಂಕಿ ಕೆನ್ನಾಲಿಗೆಗೆ ನಾಲ್ವರು ಪುಟ್ಟ ಬಾಲಕಿಯರ ಜೀವಗಳು ಕಮರಿಹೋಗಿವೆ.