ನವದೆಹಲಿ: ಮದುವೆ ಎಂಬುದು "ವಿಶೇಷವಾದ ಭಿನ್ನರೀತಿಯ ಸಂಸ್ಥೆ" ಎಂದು ಕರೆದ ಕೇಂದ್ರವು ಇಂದು ಮತ್ತೆ ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡುವುದನ್ನು ವಿರೋಧಿಸಿದೆ. ಸಲಿಂಗ ವಿವಾಹವನ್ನು ಅಸ್ತಿತ್ವದಲ್ಲಿರುವ ವಿವಾಹದ ಪರಿಕಲ್ಪನೆಗೆ ಸಮಾನವಾಗಿ ಪರಿಗಣಿಸಲು ಹೊರಟರೆ ಅದು "ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಹೇಳಿದೆ. ಒಂದು ವೇಳೆ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿ ನ್ಯಾಯಾಲಯ ಆದೇಶ ನೀಡಿದರೆ ಅದು ಕಾನೂನಿನ ಒಂದು ಇಡೀ ಶಾಖೆಯನ್ನು ಪುನಃ ಬರೆದಂತಾಗುತ್ತದೆ. ನ್ಯಾಯಾಲಯವು ಅಂಥ "ಓಮ್ನಿಬಸ್ ಆದೇಶ" ನೀಡಬಾರದು ಎಂದು ಕೇಂದ್ರ ಸರ್ಕಾರ ವಾದಿಸಿತು.
ಸಲಿಂಗ ವಿವಾಹವನ್ನು ಹೊರತುಪಡಿಸಿ "ವಿಭಿನ್ನವಾದ ವಿವಾಹದ ಸಂಸ್ಥೆಗೆ" ಮಾನ್ಯತೆ ನೀಡುವುದು ತಾರತಮ್ಯವಲ್ಲ ಎಂದು ಸರ್ಕಾರವು ವಾದಿಸಿತು. ಏಕೆಂದರೆ ಎಲ್ಲಾ ಧರ್ಮಗಳಾದ್ಯಂತ ಮದುವೆಗಳಂತಹ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸಾಮಾಜಿಕ ಕಾನೂನು ಸಂಬಂಧಗಳು ಆಳವಾಗಿವೆ. ವಿವಾಹವು ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ ಬೇರೂರಿದೆ ಮತ್ತು ವಾಸ್ತವವಾಗಿ ಹಿಂದೂ ಕಾನೂನಿನ ಎಲ್ಲ ಶಾಖೆಗಳಲ್ಲಿ ಒಂದು ಸಂಸ್ಕಾರ ಎಂದು ಪರಿಗಣಿಸಲಾಗಿದೆ. ಇಸ್ಲಾಂನಲ್ಲಿ ಸಹ, ಇದು ಒಪ್ಪಂದವಾಗಿದ್ದರೂ, ಇದು ಪವಿತ್ರ ಒಪ್ಪಂದವಾಗಿದೆ ಮತ್ತು ಮಾನ್ಯವಾದ ಮದುವೆಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ಎಂದು ಕೇಂದ್ರ ಸರ್ಕಾರ ವಾದಿಸಿತು.
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಗಳು ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೆಲವೇ ನಗರ ಗಣ್ಯರ ದೃಷ್ಟಿಕೋನದ ಅರ್ಜಿಗಳಾಗಿವೆ ಎಂದು ಕರೆದಿರುವ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ ಸಂಸತ್ತು ಎಲ್ಲ ಗ್ರಾಮೀಣ, ಅರೆ - ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನಡೆಸಲಿದೆ. ಮತ್ತಷ್ಟು ಹಕ್ಕುಗಳ ಸೃಷ್ಟಿ, ಸಂಬಂಧಗಳಿಗೆ ಮಾನ್ಯತೆ ಮತ್ತು ಅಂತಹ ಸಂಬಂಧಗಳಿಗೆ ಕಾನೂನು ಪಾವಿತ್ರ್ಯವನ್ನು ನೀಡುವುದು ಶಾಸಕಾಂಗದಿಂದ ಮಾತ್ರ ಸಾಧ್ಯವೇ ಹೊರತು ನ್ಯಾಯಾಂಗದಿಂದಲ್ಲ ಎಂದು ಕೇಂದ್ರವು ಪ್ರತಿಪಾದಿಸಿದೆ.
ಹೊಸ ಸಾಮಾಜಿಕ ಸಂಸ್ಥೆಯನ್ನು ರಚಿಸುವುದು ಅಥವಾ ಗುರುತಿಸುವುದು ಒಟ್ಟಾರೆಯಾಗಿ ಹಕ್ಕು/ಆಯ್ಕೆಯ ವಿಷಯವೆಂದು ಹೇಳಲಾಗುವುದಿಲ್ಲ ಎಂದು ಅದು ವಾದಿಸಿತು. ವೈಯಕ್ತಿಕ ಸ್ವಾಯತ್ತತೆಯ ಹಕ್ಕು ಸಲಿಂಗ ವಿವಾಹವನ್ನು ಗುರುತಿಸುವ ಹಕ್ಕನ್ನು ಒಳಗೊಂಡಿಲ್ಲ. ಅದರಲ್ಲೂ ನ್ಯಾಯಾಂಗ ತೀರ್ಪಿನ ಮೂಲಕ ಇದನ್ನು ಮಾಡುವಂತಿಲ್ಲ ಎಂದು ಕೇಂದ್ರವು ಹೇಳಿದೆ. ದೇಶದಲ್ಲಿ ಮದುವೆ ಎಂಬ ಸಂಸ್ಥೆಗೆ ಇರುವ ಪವಿತ್ರತೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಸಾಮಾಜಿಕ ಸಂಬಂಧಗಳಿಗೆ ಕಾನೂನು ಮಾನ್ಯತೆ ನೀಡಬೇಕು ಎಂಬುದನ್ನು ಜನಪ್ರತಿನಿಧಿಗಳು ನಿರ್ಧರಿಸುತ್ತಾರೆ ಎಂದು ಕೇಂದ್ರ ಪ್ರತಿಪಾದಿಸಿತು.
ಇದನ್ನೂ ಓದಿ : ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ