ನವದೆಹಲಿ: ತೃತೀಯ ಲಿಂಗಿಗಳ ಕಲ್ಯಾಣ ಮತ್ತು ರಕ್ಷಣೆಯ ದೃಷ್ಟಿ, ಪುನರ್ವಸತಿ ಕಲ್ಪಿಸಲು ನಿಯಮ 2020 ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ತೃತೀಯ ಲಿಂಗಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ನಿರ್ದೇಶನ
ಲಿಂಗ ತಾರತಮ್ಯ ಹಾಗೂ ತೃತೀಯ ಲಿಂಗಿಗಳ ರಕ್ಷಣೆಗಾಗಿ ಕೇಂದ್ರ ಗೃಹ ಸಚಿವಾಲಯ ಮುಂದಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ತೃತೀಯ ಲಿಂಗಿ ಸಮುದಾಯದ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. 2019 ರ ಸೆಕ್ಷನ್ 18ರ ಪ್ರಕಾರ ಒಬ್ಬ ತೃತೀಯ ಲಿಂಗಿಯನ್ನು ಬಲವಂತವಾಗಿ ಅಥವಾ ಬಂಧಿಸಿ ದುಡಿಸಿಕೊಳ್ಳಬಾರದು. ಇದನ್ನು ಮೀರಿ ತೃತೀಯ ಲಿಂಗಿಗಳನ್ನು ಒತ್ತಾಯಿಸಿದರೆ ಅಥವಾ ಪ್ರಚೋದಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಗೃಹ ಸಚಿವಾಲಯದ ಮಹಿಳಾ ಸುರಕ್ಷತಾ ವಿಭಾಗ ಹೇಳಿದೆ.
ತೃತೀಯ ಲಿಂಗಿಗಳಿಗೆ ಮಾನಸಿಕ ಅಥವಾ ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ, ಮೌಖಿಕ ಮತ್ತು ಭಾವನಾತ್ಮಕ ನಿಂದನೆ ಮತ್ತು ಆರ್ಥಿಕ ದುರುಪಯೋಗ ಸೇರಿದಂತೆ ಜೀವನ ಸುರಕ್ಷತೆ, ಆರೋಗ್ಯ ಅಥವಾ ಯೋಗಕ್ಷೇಮಕ್ಕೆ ಹಾನಿ ಅಥವಾ ಅಪಾಯ ಉಂಟು ಮಾಡಿದರೆ ಅವರನ್ನು ಶಿಕ್ಷೆಗೆ ಗುರಿಪಡಿಲಾಗುವುದು ಎಂದು ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಪವನ್ ಮೆಹ್ತಾ ಮಾಹಿತಿ ನೀಡಿದ್ದಾರೆ.