ನವದೆಹಲಿ :ಸೇನಾ ನೇಮಕಾತಿಗೆ ಸಂಬಂಧಿಸಿದ ಹೊಸ 'ಅಗ್ನಿಪಥ' ಯೋಜನೆ ವಿರೋಧಿಸಿ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ ಕೇಂದ್ರ ಸರ್ಕಾರ, 'ಅಗ್ನಿಪಥ್' ಯೋಜನೆಯಡಿ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದಲ್ಲಿ ಶೇ.10ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ಘೋಷಿಸಿದೆ.
ಅಗ್ನಿವೀರರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಸಚಿವಾಲಯದ ಖಾಲಿ ಇರುವ ಹುದ್ದೆಗಳಲ್ಲಿ ಶೇ.10ರಷ್ಟು ಉದ್ಯೋಗಗಳನ್ನು 'ಅಗ್ನಿವೀರರಿಗೆ' ಮೀಸಲಿಡಲು ಅಗತ್ಯವಾದ ಅರ್ಹತಾ ಮಾನದಂಡಗಳ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದೆ.
ಭಾರತೀಯ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ನಾಗರಿಕ ಹುದ್ದೆಗಳಲ್ಲಿ ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂದೂ ರಕ್ಷಣಾ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಈ ಮೀಸಲಾತಿಯು ಮಾಜಿ ಸೈನಿಕರಿಗೆ ಕಲ್ಪಿಸುವ ಮೀಸಲಾತಿಗೆ ಹೆಚ್ಚುವರಿಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಅಗತ್ಯ ತಿದ್ದುಪಡಿಗೆ ಬದ್ಧ: 'ಅಗ್ನಿಪಥ್' ಯೋಜನೆಯಲ್ಲಿ ಈ ನಿಬಂಧನೆಗಳನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುತ್ತದೆ. ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ನೇಮಕಾತಿ ನಿಯಮಗಳಿಗೂ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲು ಸಲಹೆ ನೀಡಲಾಗುವುದು. ಅಗತ್ಯ ವಯಸ್ಸಿನ ಸಡಿಲಿಕೆಯನ್ನು ಸಹ ಮಾಡಲಾಗುವುದು ಎಂದು ರಕ್ಷಣಾ ಸಚಿವಾಲಯದ ಕಚೇರಿಯು ಟ್ವೀಟ್ ಮಾಡಿ ತಿಳಿಸಿದೆ.
ಇದನ್ನೂ ಓದಿ:ಅಗ್ನಿಪಥ್ಗೆ ಆಕ್ರೋಶ: 60 ಕಿ.ಮೀ ಓಡಿ ಅಸಮಾಧಾನ ಹೊರಹಾಕಿದ ಸೇನಾ ಉದ್ಯೋಗದ ಆಕಾಂಕ್ಷಿ!