ಪುಲಿವೆಂದುಲ (ಆಂಧ್ರಪ್ರದೇಶ):ಮಾಜಿ ಸಚಿವ ವೈ.ಎಸ್. ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವೈಎಸ್‌ಆರ್‌ಸಿಪಿ ಸಂಸದ ಅವಿನಾಶ್ ರೆಡ್ಡಿ ಅವರ ತಂದೆ ವೈ ಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಇಂದು ಬೆಳಗ್ಗೆ ಬಂಧಿಸಿದೆ. ಪುಲಿವೆಂದುಲದ ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮೆಮೋ ನೀಡಿ ಬಂಧಿಸಿದರು.
ಇದೇ ವೇಳೆ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ ಎಂದು ಮಾಹಿತಿ ಅರಿತ ಅವರ ಬೆಂಬಲಿಗರುಮ, ಕಾರ್ಯಕರ್ತರು ಮನೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಬಂಧನದ ನಂತರ ಅವರನ್ನು ಪುಲಿವೆಂದುಲದಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. ಅಧಿಕಾರಿಗಳು ಅವರನ್ನು ಇಂದು ಸಂಜೆಯೊಳಗೆ ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿ ಕರೆದೊಯ್ಯುವ ವೇಳೆ ಅವರ ಬೆಂಬಲಿಗರು ಸಿಬಿಐ ಅಧಿಕಾರಿಗಳ ವಾಹನಗಳನ್ನು ತಡೆಯಲು ಯತ್ನಿಸಿದ ಘಟನೆಯೂ ನಡೆದಿದೆ.
ಕೆಲ ದಿನಗಳ ಹಿಂದೆ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಸಂಸದ ಅವಿನಾಶ್ ರೆಡ್ಡಿ ಅವರ ಬೆಂಬಲಿಗರಾದ ಗಜ್ಜಲ ಉದಯಕುಮಾರ್ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ವಿವೇಕ ರೆಡ್ಡಿ ಹತ್ಯೆಗೂ ಮುನ್ನ ಭಾಸ್ಕರ್ ರೆಡ್ಡಿ ಅವರ ನಿವಾಸದಲ್ಲಿ ಉದಯಕುಮಾರ್ ಇದ್ದುದನ್ನು ಗೂಗಲ್ ಟೇಕ್ ಔಟ್ ಮೂಲಕ ಸಿಬಿಐ ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿಯನ್ನು ಬಂಧಿಸಿದ್ದಾರೆ. ಮೊದಲಿಗೆ ಸಿಬಿಐ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ಅವಿನಾಶ್ ರೆಡ್ಡಿ ಅವರ ಮನೆಗೆ ತೆರಳಿದ್ದರು ಎಂದು ವರದಿಯಾಗಿತ್ತು. ಆದರೆ ಅಲ್ಲಿಗೆ ಯಾರೂ ಬಂದಿಲ್ಲ ಎಂದು ಸಂಸದರ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.