ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಾಪ್ಕಾಸ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜಿಂದರ್ ಕುಮಾರ್ ಗುಪ್ತಾ ಮತ್ತು ಅವರ ಪುತ್ರ ಗೌರವ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಬಂಧಿಸಿದೆ. ಮಂಗಳವಾರ ವಿವಿಧ ಸ್ಥಳದಲ್ಲಿ ನಡೆದ ದಾಳಿ ಸಂದರ್ಭದಲ್ಲಿ 38 ಕೋಟಿ ರೂ.ಗೂ ಹೆಚ್ಚು ನಗದು ಪತ್ತೆಯಾಗಿದ್ದು, ಇದರ ಇಬ್ಬರನ್ನೂ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ವಾಪ್ಕಾಸ್ (WAPCOS) ಅನ್ನು ಈ ಹಿಂದೆ ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಇದು ಸಂಪೂರ್ಣ ಸರ್ಕಾರದ ಒಡೆತನದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಜಲ ಶಕ್ತಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
ಈ ಸಂಸ್ಥೆಯಲ್ಲಿ 2011ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ರಾಜಿಂದರ್ ಕುಮಾರ್ ಗುಪ್ತಾ ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ಸಂಪತ್ತು ಗಳಿಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಗುಪ್ತಾ, ಪತ್ನಿ ರೀಮಾ ಸಿಂಗಲ್, ಮಗ ಗೌರವ್ ಸಿಂಗಲ್ ಮತ್ತು ಸೊಸೆ ಕೋಮಲ್ ಸಿಂಗಲ್ ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದ್ದರು. ಈ ಎಫ್‌ಐಆರ್ ನಂತರ ಮಂಗಳವಾರ ಸಿಬಿಐ ಅಧಿಕಾರಿಗಳು ತಂಡಗಳು ದೆಹಲಿ, ಗುರುಗ್ರಾಮ್, ಚಂಡೀಗಢ, ಸೋನಿಪತ್ ಮತ್ತು ಗಾಜಿಯಾಬಾದ್ ಸೇರಿದಂತೆ 19 ಸ್ಥಳಗಳಲ್ಲಿ ಏಕಾಕಾಲದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು.
ಈ ದಿಗ್ಭ್ರಮೆಗೊಳಿಸುವಷ್ಟು ಕಂತೆ-ಕಂತೆ ಹಣ ಪತ್ತೆಯಾಗಿದೆ. ಮಂಗಳವಾರ ಒಂದೇ ದಿನ ಸಿಬಿಐ 20 ಕೋಟಿ ರೂಪಾಯಿ ನಗದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿತ್ತು. ಇಂದು ಕೂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆಗೆ ಒಟ್ಟಾರೆ 38 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ನಗದು ಜೊತೆಗೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳು, ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.