ನವದೆಹಲಿ :ಕೆನಡಾದ ಟೊರಂಟೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(ಫಿಡೆ) ಕ್ಯಾಂಡಿಡೇಟ್ಸ್ ಟೂರ್ನಮೆಂಟ್ನಲ್ಲಿ ಇದೇ ಮೊದಲ ಬಾರಿಗೆ ಐವರು ಭಾರತೀಯರು ಭಾಗವಹಿಸಲಿದ್ದಾರೆ. ಎಪ್ರಿಲ್ 3ರಿಂದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಟೂರ್ನ್ಮೆಂಟ್ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಪುರುಷರ ಮತ್ತು ಮಹಿಳೆಯರ ಪಂದ್ಯಾಟ ಏಕಕಾಲದಲ್ಲಿ ನಡೆಯಲಿದೆ.
ಭಾರತೀಯ ಚೆಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಫಿಡೆ ಕ್ಯಾಂಡಿಡೇಟ್ಸ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಪುರುಷರ ವಿಭಾಗದಲ್ಲಿ ಗ್ರಾಂಡ್ ಮಾಸ್ಟರ್ ರಮೇಶ್ಬಾಬು ಪ್ರಗ್ಯಾನಂದ, ಜಿಎಂ ವಿದಿತ್ ಗುಜ್ರಾತಿ, ದೊಮ್ಮರಾಜು ಗುಕೇಶ್ ಮತ್ತು ಮಹಿಳೆಯರ ವಿಭಾಗದಲ್ಲಿ ವೈಶಾಲಿ ರಮೇಶ್ಬಾಬು ಮತ್ತು ಕೊನೇರು ಹಂಪಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.
ಈ ಹಿಂದೆ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರು ಈ ಟೂರ್ನಿಯ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದ ಏಕೈಕ ಭಾರತೀಯಯಾಗಿದ್ದರು. ಪ್ರಗ್ಯಾನಂದ್ ಮತ್ತು ಸಹೋದರಿ ವೈಶಾಲಿ ಇಬ್ಬರೂ ಈ ಪ್ರತಿಷ್ಠಿತ ಚೆಸ್ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಪ್ರಥಮ ಸಹೋದರ ಮತ್ತು ಸಹೋದರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕಳೆದ ವರ್ಷ ನಡೆದ ಚೆಸ್ ವಿಶ್ವಕಪ್ 2023 ಫೈನಲ್ ಪಂದ್ಯಾಟದಲ್ಲಿ ಪ್ರಗ್ಯಾನಂದ ಅವರು ಕಾರ್ಲ್ಸನ್ ವಿರುದ್ಧ ಪ್ರಬಲ ಹೋರಾಟ ನಡೆಸಿ ಅಂತಿಮ ಸುತ್ತಿನಲ್ಲಿ ಸೋಲನ್ನು ಕಂಡಿದ್ದರು. ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗುವ ಮೂಲಕ ಪ್ರಗ್ಯಾನಂದ್ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದರು. ಈ ಮೂಲಕ ಕ್ಯಾಂಡಿಡೇಟ್ಸ್ ಟೂರ್ನಿಗೆ ಆಯ್ಕೆಯಾದ ಅತ್ಯಂತ ಕಿರಿಯ ಮೂರನೇ ಆಟಗಾರ ಎಂಬ ಗರಿಮೆಗೆ ಪ್ರಗ್ಯಾನಂದ(18) ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಬಾಬಿ ಫಿಶರ್(15), ಕಾರ್ಲ್ಸನ್ (15) ಕ್ಯಾಂಡಿಡೇಟ್ಸ್ ಟೂರ್ನಿಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರರಾಗಿದ್ದರು.
ಜೊತೆಗೆ ಆರ್ ವೈಶಾಲಿ ಮತ್ತು ವಿದಿತ್ ಗುಜ್ರಾತಿ ಫಿಡೆ ಗ್ರಾಂಡ್ ಸ್ವಿಸ್ ಟೂರ್ನಮೆಂಟ್ನಲ್ಲಿ ಗೆಲ್ಲುವ ಮೂಲಕ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದರು. ಅನಿತ್ ಗಿರಿ ಅವರು ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ನಡೆದ ಫಿಡೆ ವರ್ಲ್ಡ್ ಬ್ಲಿಟ್ಜ್ ಟೂರ್ನಿಯಲ್ಲಿ ಸೋತ ಕಾರಣ ಡಿ ಗುಕೇಶ್ ಅವರು ಟೂರ್ನಿಗೆ ಆಯ್ಕೆಯಾದರು. ಜನವರಿ 2024ರ ಫಿಡೆ ರೇಟಿಂಗ್ಸ್ನಲ್ಲಿ ಅತ್ಯುನ್ನತ ಶ್ರೇಣಿ ಗಳಿಸಿದ್ದಕ್ಕೆ ಕೊನೆರು ಹಂಪಿ ಅವರು ಕ್ಯಾಂಡಿಡೇಟ್ಸ್ ಟೂರ್ನಿಗೆ ಆಯ್ಕೆಯಾದರು.
ಕ್ಯಾಂಡಿಡೇಟ್ಸ್ ಟೂರ್ನಿಯು ಚಾಂಪಿಯನ್ ಆಟಗಾರರ ನಡುವೆ ನಡೆಯುವ ಪಂದ್ಯಾಟವಾಗಿದೆ. ಇಲ್ಲಿ ವಿವಿಧ ದೇಶಗಳ ಚೆಸ್ ಚಾಂಪಿಯನ್ಸ್ಗಳ ನಡುವೆ ಕಾದಾಟ ನಡೆಯಲಿದೆ. ಚೀನಾದ ಡಿಂಗ್ ಲಿರೆನ್(ಪುರುಷರ ವಿಭಾಗ), ಜು ವೆಂನ್ಜುನ್ (ಮಹಿಳೆಯರ ವಿಭಾಗ)ದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.
ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಭಾಗವಹಿಸುವ ಪುರುಷ ಸ್ಪರ್ಧಿಗಳು:
ಇಯಾನ್ ನೆಪೋಮ್ನಿಯಾಚ್ಚಿ (ವಿಶ್ವ ಚಾಂಪಿಯನ್‌ಶಿಪ್ ರನ್ನರ್-ಅಪ್)
ಮ್ಯಾಗ್ನಸ್ ಕಾರ್ಲ್ಸೆನ್ (FIDE ವಿಶ್ವಕಪ್ ವಿಜೇತ)
ಪ್ರಗ್ಯಾನಂದ ರಮೇಶ್ ಬಾಬು (FIDE ವಿಶ್ವಕಪ್ ರನ್ನರ್ ಅಪ್)
ಫ್ಯಾಬಿಯಾನೊ ಕರುವಾನಾ (FIDE ವಿಶ್ವಕಪ್ ಮೂರನೇ ಸ್ಥಾನ)
ವಿದಿತ್ ಗುಜರಾತಿ (FIDE ಗ್ರ್ಯಾಂಡ್ ಸ್ವಿಸ್ ವಿಜೇತ)