ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸಿಎಎ ಜಾರಿಯಾದರೆ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಂಗಳವಾರ ಹೇಳಿದ್ದಾರೆ. ಸಿಎಎ ಮಸೂದೆಯನ್ನು ಮೂರು ವರ್ಷಗಳ ಹಿಂದೆ ಅಂಗೀಕರಿಸಲಾಗಿದೆ, ಆದರೆ ಬಿಜೆಪಿ ಅದನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಅವರು ಕೇಂದ್ರದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುಮಾರು ಮೂರು ವರ್ಷಗಳ ಹಿಂದೆ ಸಿಎಎ ಅಂಗೀಕರಿಸಲ್ಪಟ್ಟಿದೆ. ಅದನ್ನು ಇನ್ನೂ ಏಕೆ ಜಾರಿಗೊಳಿಸಲಾಗಿಲ್ಲ? ಇದನ್ನು ಜಾರಿಗೆ ತಂದರೆ ಹಿಂದೂಗಳು ಮಾತ್ರ ಅಪಾಯಕ್ಕೆ ಸಿಲುಕುತ್ತಾರೆ ಎಂದು ಅವರು ಹೇಳಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ವಿಷಯ ಮತ್ತೊಮ್ಮೆ ತೀವ್ರಗೊಂಡಿದ್ದು, ವಿರೋಧ ಪಕ್ಷದ ನಾಯಕರು ಇದು ಕೇವಲ ಮತದಾರರನ್ನು ಓಲೈಸುವ ಸಾಧನ ಎಂದು ಟೀಕಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ, ಸಿಎಎ ಮತ್ತು ಎನ್‌ಆರ್‌ಸಿ ಕೇವಲ ರಾಜಕೀಯ ಸಾಧನಗಳು ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪಂಚಾಯತ್ ಚುನಾವಣೆಯಿಂದಾಗಿ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚುತ್ತಿದೆ. ರಾಜ್ಯ ಸರ್ಕಾರವು ಗೂಂಡಾಗಳಿಂದ ತುಂಬಿದೆ, ಹೀಗಾಗಿ ಪಂಚಾಯತ್ ಚುನಾವಣೆಯ ಸಮಯದಲ್ಲಿ ಬಂಗಾಳದಲ್ಲಿ ದೊಡ್ಡ ಮಟ್ಟದ ಅಶಾಂತಿ ಉಂಟಾಗುತ್ತದೆ ಎಂದು ಆರೋಪಿಸಿದರು.