ನವದೆಹಲಿ:ವಿವಿಧ ಕಾರಣಕ್ಕಾಗಿ ತೆರವಾಗಿರುವ ಬಿಹಾರದ 2 ಕ್ಷೇತ್ರ ಸೇರಿದಂತೆ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಸಮರಕ್ಕೆ ನಾಳೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೂ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಎಲ್ಲೆಲ್ಲಿ ಚುನಾವಣೆ:ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಹಾರದ ಮೊಕಾಮಾ, ಗೋಪಾಲ್‌ಗಂಜ್ ಎರಡು ಕ್ಷೇತ್ರಗಳಿದ್ದರೆ, ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರ, ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡು, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಮ್‌ನಗರ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಚುನಾವಣಾ ಆಯೋಗ ಈ ಮೊದಲು ಉಪಚುನಾವಣೆಗಾಗಿ ಅಕ್ಟೋಬರ್ 7 ರಂದು ಅಧಿಸೂಚನೆ ಹೊರಡಿಸಿತ್ತು. ಅಕ್ಟೋಬರ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 17 ಕೊನೆ ದಿನವಾಗಿತ್ತು. ನವೆಂಬರ್ 6ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
7 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 2 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಡಿ, ಶಿವಸೇನೆ ಮತ್ತು ಆರ್‌ಜೆಡಿ ತಲಾ ಒಂದು ಸ್ಥಾನದಲ್ಲಿ ಸೆಣಸಲಿವೆ. ಉಪಚುನಾವಣೆಯ ಗೆಲುವು ವಿಧಾನಸಭೆಗಳಲ್ಲಿ ಮಹತ್ತರ ಪರಿಣಾಮ ಬೀರದಿದ್ದರೂ, ಬಿಜೆಪಿಯ ಸವಾಲು ಎದುರಿಸಲು ಆಯಾ ಪಕ್ಷಗಳು ಸಿದ್ಧತೆ ನಡೆಸಿವೆ. ಇದರ ಹಣೆಬರಹ ನವೆಂಬರ್ 6 ರಂದು ನಡೆಯುವ ಮತ ಎಣಿಕೆ ಗೊತ್ತಾಗಲಿದೆ.
ಅಂಧೇರಿ ಪೂರ್ವ- ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಾದ ರಾಜಕೀಯ ಪಲ್ಲಟದ ನಂತರದ ಮೊದಲ ಚುನಾವಣೆ ಇದಾಗಿದೆ. ಶಿವಸೇನೆ 2 ಬಣಗಳಾಗಿದ್ದು, ಉದ್ಧವ್ ಠಾಕ್ರೆ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಶಾಸಕ ರಮೇಶ್ ಲಟ್ಕೆ ನಿಧನರಾದ ಬಳಿಕ ತೆರವಾದ ಸ್ಥಾನಕ್ಕೆ ಅವರ ಪತ್ನಿಗೆ ಟಿಕೆಟ್ ನೀಡಲಾಗಿದೆ. ಸರ್ಕಾರದ ಭಾಗವಾಗಿರುವ ಬಿಜೆಪಿ ಪಕ್ಷ ಈ ಚುನಾವಣೆಯಿಂದ ಹಿಂದೆ ಸರಿದಿದೆ. ಇದರಿಂದ ಇಲ್ಲಿ ಶಿವಸೇನೆ ಅಭ್ಯರ್ಥಿ ಗೆಲ್ಲಲಿದ್ದಾರೆ.
ಮುನುಗೋಡು - ತೆಲಂಗಾಣ:ಕಾಂಗ್ರೆಸ್‌ನ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಸ್ಥಾನ ತೆರವಾಗಿತ್ತು. ಅಧಿಕಾರದಲ್ಲಿರುವ ಟಿಆರ್ಎಸ್, ಬಿಆರ್ಎಸ್ ಆಗಿ ಬದಲಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಬಿಆರ್ಎಸ್ ಈ ಕ್ಷೇತ್ರದಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಲು ಮುಂದಾದರೆ, ಬಿಜೆಪಿಯಿಂದ ರೆಡ್ಡಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಕೂಡ ಇಲ್ಲಿ ಸ್ಪರ್ಧಿಸಿದ್ದು ತ್ರಿಕೋನ ಸ್ಪರ್ಧೆ ನಡೆಯಲಿದೆ.