ನಾಸಿಕ್(ಮಹಾರಾಷ್ಟ್ರ):ನಾಸಿಕ್ನಿಂದ ಪುಣೆಗೆ ತೆರಳುತ್ತಿದ್ದ ಟ್ರಕ್ಗೆ, ಯವತ್ಮಾಲ್ನಿಂದಮುಂಬೈಗೆ ಬರುತ್ತಿದ್ದ ಖಾಸಗಿ ಬಸ್ ಗುದ್ದಿದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು ಮಕ್ಕಳು ಸೇರಿದಂತೆ 14 ಜನರು ಸಜೀವ ದಹನವಾದ ದಾರುಣ ಘಟನೆ ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಸಂಭವಿಸಿದೆ. 21 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಘಟನೆಗೀಡಾದ ಖಾಸಗಿ ಬಸ್ ಯವತ್ಮಾಲ್ನಿಂದಮುಂಬೈಗೆ ಪಯಣಿಸುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಟ್ರಕ್ಗೆ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತಕ್ಕೀಡಾದ ರಭಸಕ್ಕೆ ಟ್ರಕ್ ಪಲ್ಟಿಯಾಗಿ ರಸ್ತೆ ಬದಿ ಬಿದ್ದರೆ, ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ನಿದ್ರೆಯಲ್ಲಿದ್ದ ಪ್ರಯಾಣಿಕರು ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಹೊರಬರಲಾಗದೇ ಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಸದ್ಯಕ್ಕೆ 14 ಜನರು ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯ ಜ್ವಾಲೆಗೆ ಬಸ್ ಸುಟ್ಟು ಕರಕಲಾಗಿದೆ.