ಕರ್ನಾಟಕ

karnataka

ETV Bharat / bharat

ಸರ್ಕಾರಿ-ಖಾಸಗಿ ಬಸ್​ ನಡುವೆ ಭೀಕರ ಅಪಘಾತ : ಐವರು ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ - ಈಟಿವಿ ಭಾರತ ಕನ್ನಡ

Bus accident: ತಮಿಳುನಾಡಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಘಟನೆ ಇಂದು ನಡೆದಿದೆ.

ಸರ್ಕಾರಿ-ಖಾಸಗಿ ಬಸ್​ ನಡುವೆ ಭೀಕರ ಅಪಘಾತ
ಸರ್ಕಾರಿ-ಖಾಸಗಿ ಬಸ್​ ನಡುವೆ ಭೀಕರ ಅಪಘಾತ

By ETV Bharat Karnataka Team

Published : Nov 11, 2023, 11:47 AM IST

ತಿರುಪತ್ತೂರು:ಸರ್ಕಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 5ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಂದು ತಮಿಳುನಾಡಿನ ವಾಣಿಯಂಬಾಡಿಯ ಚೆಟ್ಟಿಯಪ್ಪನೂರು ಬಳಿಯ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಸರ್ಕಾರಿ ಬಸ್ ನಿಯಂತ್ರಣ ತಪ್ಪಿ ಮತ್ತೊಂದು ಬದಿಯ ರಸ್ತೆಯಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್​ವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಉಳುಂದೂರುಪೇಟೆ ಮೂಲದ ಸರ್ಕಾರಿ ಬಸ್ ಚಾಲಕ ಎಟುಮ್ಮಲೈ, ಕೋಲಾರದ ಖಾಸಗಿ ಬಸ್ ಚಾಲಕ ಮೊಹಮ್ಮದ್ ನದೀಮ್, ಖಾಸಗಿ ಬಸ್ ಕ್ಲೀನರ್ ವಾಣಿಯಂಪಾಡಿಯ ಮೊಹಮ್ಮದ್ ಬೈರೋಸ್, ಚಿತ್ತೂರಿನ ಅಜಿತ್ ಕುಮಾರ್ ಮತ್ತು ಚೆನ್ನೈನ ಕೃತಿಕಾ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ವಾಣಿಯಂಬಾಡಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಎರಡು ಬಸ್​ಗಳ ಅಪಘಾತದಿಂದ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಬಳಿಕ ಪೊಲೀಸರು ಬಸ್​ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಣಿಯಂಬಾಡಿ ವಿಧಾನಸಭಾ ಸದಸ್ಯ ಸೆಂಥಿಲ್ ಕುಮಾರ್, ತಿರುಪತ್ತೂರು ಜಿಲ್ಲಾಧಿಕಾರಿ ಬಾಸ್ಕರ ಪಾಂಡಿಯನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಲ್ಬರ್ಟ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೋಲ್​ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೆ ಕಾರು ಡಿಕ್ಕಿ

ಮುಂಬೈ:ವಾಣಿಜ್ಯ ನಗರಿ ಮುಂಬೈನ ಸೀ ಲಿಂಕ್​ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಆರು ವಾಹನಗಳಿಗೆ ವೇಗವಾಗಿ ಬಂದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿತ್ತು.

ಬಾಂದ್ರಾ ವರ್ಲಿ ಸೀ ಲಿಂಕ್ ಸಮೀಪ ಅಪಘಾತ ಸಂಭವಿಸಿದರಿಂದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನೋವಾ ಕಾರು ವರ್ಲಿ ಕಡೆಗೆ ವೇಗವಾಗಿ ಬರುತ್ತಿತ್ತು. ಚಾಲಕ ಸಿ-ಲಿಂಕ್​ ಬರುವ ಮುನ್ನ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಗಾಬರಿಗೊಂಡ ಆತ ಬಾಂದ್ರಾದೆಡೆಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಸೀ ಲಿಂಕ್‌ನಲ್ಲಿರುವ ಟೋಲ್ ಪ್ಲಾಜಾದಲ್ಲಿ ಅನೇಕ ವಾಹನಗಳಿದ್ದವು. ಅತಿವೇಗವಾಗಿ ಬಂದ ಕಾರಣ ನಿಯಂತ್ರಣಕ್ಕೆ ಬಾರದೇ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.

ABOUT THE AUTHOR

...view details