ನವದೆಹಲಿ :ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಸಾಮಾನ್ಯವಾಗಿ ಮುಖ್ಯ ಆರ್ಥಿಕ ಸಲಹೆಗಾರರಿಂದ ರಚಿಸಲ್ಪಟ್ಟಿರುವ ಸಮೀಕ್ಷೆಯು ಪ್ರಸ್ತುತ ಆರ್ಥಿಕ ವರ್ಷ ಅಂದರೆ ಪ್ರಸ್ತುತ ದೇಶದ ಆರ್ಥಿಕತೆಯ ಬಗ್ಗೆ ವಿವರವಾದ ಅಂಕಿ-ಅಂಶಗಳನ್ನು ಮತ್ತು ಭವಿಷ್ಯದ ನೀತಿ-ನಿರ್ದೇಶನವನ್ನು ಸಹ ಒಳಗೊಂಡಿರುತ್ತದೆ.
ಮೊದಲ ಆರ್ಥಿಕ ಸಮೀಕ್ಷೆಯನ್ನು ಆರ್ಥಿಕ ವರ್ಷ 1950-51ರಲ್ಲಿ ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ, ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಬಜೆಟ್‌ನೊಂದಿಗೆ ಪ್ರಸ್ತುತಪಡಿಸಲಾಯಿತು. ಆದರೆ, 1964ರಿಂದ ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ಮಂಡಿಸುತ್ತಾ ಬರಲಾಗಿದೆ. ಕಳೆದ ವರ್ಷ ಮಾತ್ರ ಕೇಂದ್ರ ಬಜೆಟ್‌ಗೆ ಎರಡು ದಿನಗಳ ಮೊದಲು ಮಂಡಿಸಲಾಗಿತ್ತು.
ಸಾಮಾನ್ಯವಾಗಿ, ಆರ್ಥಿಕ ಸಮೀಕ್ಷೆಯನ್ನು 'ಸಂಚಿಕೆ ಒಂದು' ಮತ್ತು 'ಸಂಚಿಕೆ ಎರಡು' ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅಂಕಿ-ಅಂಶಗಳು ಇರುತ್ತದೆ. ಆರ್ಥಿಕ ಸಮೀಕ್ಷೆಯ ಮೊದಲ ಭಾಗವು ಆರ್ಥಿಕ ವಿಚಾರಗಳು, ದೊಡ್ಡ ನೀತಿ ಸಮಸ್ಯೆಗಳು, ಭಾರತೀಯ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಇತರ ವಿಷಯಗಳನ್ನು ಹಾಗೂ ಎರಡನೇ ಸಂಚಿಕೆಯು ಪ್ರಮುಖ ಸ್ಥೂಲ-ಆರ್ಥಿಕ ಸೂಚಕಗಳೊಂದಿಗೆ ಆರ್ಥಿಕತೆಯ ಸ್ಥಿತಿಯೊಂದಿಗೆ ವ್ಯವಹರಿಸುವ ಭಾರೀ ದತ್ತಾಂಶದ ದಾಖಲೆಗಳನ್ನು ಒಳಗೊಂಡಿರುತ್ತದೆ.
ಕಳೆದ ವರ್ಷ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಿದ್ದರು. ಮೊದಲ ಭಾಗದಲ್ಲಿ, ಶತಮಾನಕ್ಕೊಮ್ಮೆ ಸಂಭವಿಸುವ ಬಿಕ್ಕಟ್ಟಿನ ನಡುವೆ ಜೀವನ ಮತ್ತು ಜೀವನೋಪಾಯವನ್ನು ಉಳಿಸುವ ಮತ್ತು ಬೆಳವಣಿಗೆಯು ಸಾಲದ ಸುಸ್ಥಿರತೆಗೆ ಕಾರಣವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಅವರ ಆಲೋಚನೆಗಳ ಕುರಿತು ಮಾತನಾಡಿದ್ದರು.