ಮಣಿಪುರ:ಕಳೆದ ಕೆಲವು ದಿನಗಳಿಂದ ಹಿಂಸಾಚಾರದ ಮಡುವಿನಲ್ಲಿ ಬಿದ್ದಿರುವ ಮಣಿಪುರದಲ್ಲಿ ಇದೀಗ ಭದ್ರತಾ ಪಡೆಗಳ ಮೇಲೆ ಶಂಕತ ಉಗ್ರರು ಗುಂಡಿನಾ ದಾಳಿ ನಡೆಸಿರುವ ಘಟನೆ ನಡೆದಿದೆ.ಸೋಮವಾರ ಮಧ್ಯರಾತ್ರಿ ಮಣಿಪುರದ ಕಾಕ್ಚಿಂಗ್ ಜಿಲ್ಲೆಯ ಸೆರೊ ಸುಗ್ನು ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಇಬ್ಬರು ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹುತಾತ್ಮರಾದ ಯೋಧನನ್ನು ಬಿಎಸ್ಎಫ್ ಕಾನ್ಸ್ಟೇಬಲ್ ರಂಜಿತ್ ಯಾದವ್ ಎಂದು ಗುರುತಿಸಲಾಗಿದೆ.
ಬಿಎಸ್ಎಫ್ ಕಾನ್ಸ್ಟೇಬಲ್ ರಂಜಿತ್ ಯಾದವ್ ಅವರನ್ನು ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದ ಸೆರೋ ಪ್ರಾಕ್ಟಿಕಲ್ ಹೈಸ್ಕೂಲ್‌ಗೆ ನಿಯೋಜಿಸಲಾಗಿತ್ತು. ಕಳೆದ ತಿಂಗಳು ಆರಂಭವಾದ ಹಿಂಸಾಚಾರವನ್ನು ಹತ್ತಿಕ್ಕಲು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾವನ್ನಪ್ಪಿದವರಲ್ಲಿ ಯಾದವ್ ಎರಡನೇ ಬಿಎಸ್‌ಎಫ್ ಅಧಿಕಾರಿಯಾಗಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಘರ್ಷಣೆಯ ನಂತರ ಅಸ್ಸಾಂ ರೈಫಲ್ಸ್, ಬಿಎಸ್ಎಫ್ ಮತ್ತು ಮಣಿಪುರ ಪೊಲೀಸರು ಸುಗ್ನು-ಸೆರೋ ಪ್ರದೇಶದಲ್ಲಿ ಜಂಟಿ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
"ಬೆಳಗ್ಗೆ 4.05 ರ ಸುಮಾರಿಗೆ ಶಂಕಿತ ಕುಕಿ ಉಗ್ರಗಾಮಿಗಳು ಸೆರೋ ಪ್ರಾಕ್ಟಿಕಲ್ ಶಾಲೆಯಲ್ಲಿ ಬೀಡುಬಿಟ್ಟಿದ್ದ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ವಿವೇಚನಾರಹಿತ ಮತ್ತು ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದರು. 163 ಬೆಟಾಲಿಯನ್‌ನೊಂದಿಗೆ ನಿಯೋಜಿಸಲಾಗಿದ್ದ ಕಾನ್ಸ್ಟೇಬಲ್ ಯಾದವ್ ಅವರಿಗೆ ಬುಲೆಟ್ ಗಾಯವಾಗಿದ್ದು, ಅವರನ್ನು ಕಾಕ್ಚಿಂಗ್‌ನ ಜಿತನ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಯೋಧ ಸಾವನ್ನಪ್ಪಿರುವುದಾಗಿ ಘೋಷಣೆ ಮಾಡಿದ್ದಾರೆ, ”ಎಂದು ಬಿಎಸ್ಎಫ್ ವಕ್ತಾರರು ಹೇಳಿದರು.
ಸೇನಾ ಅಧಿಕಾರಿಗಳ ಪ್ರಕಾರ, ಜೂನ್ 5 ರ ರಾತ್ರಿ ಹಾಗೂ 6 ರ ಮುಂಜಾನೆವರೆಗೆ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ದಂಗೆಕೋರರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಅದಕ್ಕೆ ಸರಿಯಾಗಿ ನಮ್ಮ ಭದ್ರತಾ ಪಡೆಗಳು ಕೂಡ ಸಮರ್ಥವಾಗಿ ಪ್ರತಿದಾಳಿ ನಡೆಸಿದೆ ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ತಿಳಿಸಿದೆ.