ಲಂಡನ್/ಹೈದರಾಬಾದ್:ಏರ್ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಿಕ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ವಿಮಾನದಲ್ಲಿ ಇಂತಹ ಕಿಡಿಗೇಡಿ ಪ್ರಯಾಣಿಕರ ಮಧ್ಯೆಯೂ ಜೀವ ಉಳಿಸುವ ವೈದ್ಯ ಪ್ರಯಾಣಿಕರು ಇರುತ್ತಾರೆ. ಅವರು ತೋರಿದ ಸಮಯಪ್ರಜ್ಞೆ, ಶ್ರಮದಿಂದ ವ್ಯಕ್ತಿಯ ಜೀವ ಉಳಿದಿದೆ.
ಹೌದು, ಲಂಡನ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ 10 ಗಂಟೆ ಅವಧಿಯಲ್ಲಿ 2 ಬಾರಿ ಹೃದಯಾಘಾತವಾಗಿದೆ. ಇಂತಹ ತುರ್ತು ಪರಿಸ್ಥಿತಿಯನ್ನು ಭಾರತೀಯ ಮೂಲದ ಇಂಗ್ಲೆಂಡ್ ವೈದ್ಯರು ಅಚ್ಚುಕಟ್ಟಾಗಿ ನಿಭಾಯಿಸಿ, ಆತನನ್ನು ಸಾವಿನಿ ದವಡೆಯಿಂದ ಪಾರು ಮಾಡಿದ್ದಾರೆ. ಇದಕ್ಕಾಗಿ ಆ ವೈದ್ಯರು ಸತತ 5 ಗಂಟೆಕಾಲ ಶ್ರಮಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಮಾನದಲ್ಲಿ ಇರುವ ಚಿಕಿತ್ಸಾ ಉಪಕರಣಗಳನ್ನೇ ಬಳಸಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಹೈದರಾಬಾದ್ ಮೂಲದ ಡಾ ವಿಶ್ವರಾಜ್ ವೇಮಲಾ ಜೀವ ಉಳಿಸಿದ ವೈದ್ಯರು. ಲಿವರ್ ತಜ್ಞರಾದ ಅವರು ತುರ್ತು ಪರಿಸ್ಥಿತಿ ವೇಳೆ ಹೃದಯಾಘಾತಕ್ಕೆ ಚಿಕಿತ್ಸೆ ನೀಡಿದ್ದಾರೆ. 'ತಾವು ತಮ್ಮ ತಾಯಿಯ ಜೊತೆಗೆ ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದೆವು. ಈ ವೇಲೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ಹೃದಯಾಘಾತವಾಗಿದೆ. ವೈದ್ಯರು ಯಾರಾದರೂ ಇದ್ದರೆ ಉಪಚರಿಸಿ ಎಂದು ಕೋರಿದರು.'
'ತಕ್ಷಣವೇ ತಾವು ವೈದ್ಯರಾಗಿದ್ದು ಚಿಕಿತ್ಸೆ ನೀಡುವುದಾಗಿ ಒಪ್ಪಿಕೊಂಡೆ. ವಿಮಾನದಲ್ಲಿದ್ದ ತುರ್ತು ಕಿಟ್ ಅನ್ನೇ ಬಳಸಿಕೊಂಡು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದೆ. ಕಿಟ್ನಲ್ಲಿದ್ದ ಹೃದಯ ಬಡಿತ ಮಾನಿಟರ್, ಪಲ್ಸ್ ಆಕ್ಸಿಮೀಟರ್, ಗ್ಲೂಕೋಸ್ ಮೀಟರ್ ಮತ್ತು ರಕ್ತದೊತ್ತಡ ಯಂತ್ರದ ಸಹಾಯದಿಂದ ಆತನಿಗೆ ಎಷ್ಟು ಪ್ರಮಾಣದಲ್ಲಿ ಹೃದಯಾಘಾತವಾಗಿದೆ ಎಂಬುದನ್ನು ಕಂಡುಕೊಂಡೆ' ಎಂದು ಅವರು ತಿಳಿಸಿದರು.