ವಿಶಾಖಪಟ್ಟಣ(ಆಂಧ್ರ ಪ್ರದೇಶ):ತಾಳಿ ಕಟ್ಟಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದ್ದವು.. ಈ ವೇಳೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು ದಿಢೀರನೇ ಕುಸಿದುಬಿದ್ದು ಮದುವೆ ಮಂಟಪದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಸೃಜನಾ ಮೃತಪಟ್ಟ ವಧು.
ವಿಶಾಖಪಟ್ಟಣ ಜಿಲ್ಲೆಯ ಮಧುರವಾಡದಲ್ಲಿ ಮದುವೆ ಸಂಭ್ರಮದಿಂದ ನಡೆಯುತ್ತಿತ್ತು. ವಧು ಸೃಜನಾ ಮತ್ತು ವರ ಜೀರಿಗೆ- ಬೆಲ್ಲ(ವೀಳ್ಯದೆಲೆ ಶಾಸ್ತ್ರ)ದ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ವಧು ಸೃಜನಾ ಇದ್ದಕ್ಕಿದ್ದಂತೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೇ ಇದ್ದ ಕುಟುಂಬ ಸದಸ್ಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಸೃಜನಾ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು.