ಕರ್ನಾಟಕ

karnataka

ETV Bharat / bharat

ಕಡಲೆಕಾಯಿ ಮಾರುತ್ತಿದ್ದವ ಈಗ ಬ್ರಿಟಿಷ್​​​ ಸೇನಾನಿ..ಕೊಪ್ಪಳದಲ್ಲಿ ಹುಟ್ಟಿ 'ಇಂಗ್ಲೆಂಡ್​​ ಯೋಧ'ನಾದ ಕಥೆ

ಎತ್ತಣ ಮಾಮರ, ಎತ್ತಣ ಕೋಗಿಲೆ.. ಎತ್ತಣಿಂದೆತ್ತ ಸಂಬಂಧವಯ್ಯ' ಎಂಬಂತೆ ಎಲ್ಲಿಯ ಕೊಪ್ಪಳ ಜಿಲ್ಲೆ, ಎಲ್ಲಿಯ ಇಂಗ್ಲೆಂಡ್ ದೇಶ. ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಕುಗ್ರಾಮದ ಯುವಕನೊಬ್ಬ ಇಂಗ್ಲೆಂಡ್ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾನೆ. ಇನ್ನೊಂದು ವಿಶೇಷ ಅಂದ್ರೆ ಆ ಯುವಕ ಇಂಗ್ಲೆಂಡ್​​ಗೆ ಹೋಗಿದ್ದೇ ಒಂದು ರೋಚಕ ಕಥೆ.

boy-from-koppal-is-a-soldier-in-british-army
ಕೊಪ್ಪಳದಲ್ಲಿ ಹುಟ್ಟಿ 'ಇಂಗ್ಲೆಂಡ್​​ ಯೋಧ'ನಾದ ಕಥೆ

By

Published : Jul 25, 2021, 4:33 AM IST

ಕೊಪ್ಪಳ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದ ಗೋಪಾಲ ವಾಕೋಡೆ ಎಂಬ ಯುವಕ ಇಂಗ್ಲೆಂಡ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗೋಪಾಲ ವಾಕೋಡೆ ಇಂಗ್ಲೆಂಡ್ ಸೇರಿದ್ದು ಒಂದು ಅಚ್ಚರಿ ವಿಷಯವಾದರೆ ಭಾರತೀಯನೊಬ್ಬ ಅಲ್ಲಿನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಇದು ಬರೋಬ್ಬರಿ 25 ವರ್ಷದ ಹಿಂದಿನ ಕಥೆ. ಶಹಪುರ ಗ್ರಾಮದಲ್ಲಿದ್ದ ಯಲ್ಲಪ್ಪ ವಾಕೋಡೆ ಹಾಗೂ ಫಕೀರವ್ವ ಎಂಬ ದಂಪತಿಗೆ ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು. ಇವರ ಮಗ ಗೋಪಾಲ 10 ವರ್ಷದವನಾಗಿದ್ದಾಗ ಬಡತನದ ಹೊಟ್ಟೆ ಹೊರೆಯಲು ಯಲ್ಲಪ್ಪ ಹಾಗೂ ಫಕೀರವ್ವ ಗೋವಾಗೆ ದುಡಿಯಲು ಹೋಗುತ್ತಾರೆ. ಸ್ವಲ್ಪ ವರ್ಷದ ಬಳಿಕ ಯಲ್ಲಪ್ಪ ಸಾವನ್ನಪ್ಪುತ್ತಾನೆ. ಇದರಿಂದ ತಾಯಿಗೆ ಆಸರೆಯಾಗಲು ಬಾಲಕ ಗೋಪಾಲ ಗೋವಾದ ಬೀಚ್​ನಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಾನೆ.

ಕಡಲೆಕಾಯಿ ಮಾರುತ್ತಿದ್ದವ ಈಗ ಬ್ರಿಟಿಷ್​​​ ಸೇನಾನಿ

ಇಂಗ್ಲೆಂಡ್ ದಂಪತಿಯಿಂದ ಆಶ್ರಯ

ಆಗ ಪ್ರವಾಸಕ್ಕೆಂದು ಬಂದಿದ್ದ ಇಂಗ್ಲೆಂಡ್​ನ ಥಾಮಸ್ ಕೊರಲೆ, ಕೊಲಿನ್ ಹ್ಯಾನ್ಸನ್ ದಂಪತಿ ಕಣ್ಣಿಗೆ ಬಾಲಕ ಗೋಪಾಲ ಬೀಳುತ್ತಾನೆ. ಬಾಲಕನ ಮೇಲೆ ಮಮತೆಯಿಂದ ಆ ದಂಪತಿ ನೆರವು ನೀಡುತ್ತಾರೆ. ಅಲ್ಲದೇ ಪ್ರತಿ ವರ್ಷ ಗೋವಾಗೆ ಬಂದಾಗ ಬಾಲಕನ ಬಗ್ಗೆ ಕಾಳಜಿ ತೋರಿಸಿ ಮಾತನಾಡಿಸಿ ಹೋಗುತ್ತಿದ್ದರು. ಗೋಪಾಲನಿಗೆ 19 ವರ್ಷ ತುಂಬಿದ ಬಳಿಕ ವಿದೇಶಿ ದಂಪತಿ ಇಂಗ್ಲೆಂಡ್​ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವನಿಗೆ ಅಗತ್ಯ ಶಿಕ್ಷಣ ನೀಡಿ ಇಂಗ್ಲೆಂಡ್​​ ಸೇನೆಗೆ ಸೇರಿಸುತ್ತಾರೆ.

ಸದ್ಯ ಇಂಗ್ಲೆಂಡ್​​ ಪ್ರಜೆಯಾಗಿರುವ ಗೋಪಾಲ, ಜೆಸ್ಮಿನಾ ಎಂಬ ಯುವತಿಯನ್ನು ಮದುವೆಯಾಗಿದ್ದು, ಡೈಸಿ ಎಂಬ ಮುದ್ದಾದ ಮಗುವಿದೆ. ಐಶ್ವರ್ಯ ಬಂದ್ರೆ ಕುಟುಂಬವನ್ನೇ ಮರೆಯುವ ಜನರ ನಡುವೆ ಗೋಪಾಲ ಮಾತ್ರ ತವರಿನ ಸಂಬಂಧ ಕಡಿದುಕೊಂಡಿಲ್ಲ. ಮೂರು ವರ್ಷಕ್ಕೊಮ್ಮೆ ಗ್ರಾಮಕ್ಕೆ ಬಂದು ಬಂಧು-ಬಾಂಧವರೊಂದಿಗೆ ಬೆರೆಯುತ್ತಾರೆ. ಸದ್ಯ ಗೋಪಾಲನ ತಾಯಿ ಹಾಗೂ ಕುಟುಂಬ ಶಹಪುರದಲ್ಲಿಯೇ ವಾಸ ಮಾಡುತ್ತಿದೆ.

ಹಿಂದುಳಿದ ಗೋಂಧಳಿ ಸಮುದಾಯದ ಅಲೆಮಾರಿ ಜನಾಂಗದ ಕುವರನೊಬ್ಬ ಇಂಗ್ಲೆಂಡ್​ನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರೋದಕ್ಕೆ ಶಹಪುರ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಸಂಬಂಧಿಕರು, ಅವರ ಸಮುದಾಯದ ಜನರು ಹೆಮ್ಮೆಯಿಂದ ಬೀಗುತ್ತಾರೆ. ಆತ ಎಲ್ಲಿಯೇ ಇರಲಿ ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ.

ABOUT THE AUTHOR

...view details