ಮುಂಬೈ:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಲು ನೀಡಲಾದ ಸಮಯವನ್ನು ಬಾಂಬೆ ಹೈಕೋರ್ಟ್ ಜ. 25, 2023ರ ವರೆಗೆ ವಿಸ್ತರಿಸಿದೆ.
ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಪೀಠವು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಈ ಹಿಂದೆ ನೀಡಲಾದ ಕಾಲಾವಕಾಶ ಜನವರಿ 25, 2023 ರವರೆಗೆ ಮುಂದುವರಿಯುತ್ತದೆ. ಜನವರಿ 20 ರಂದು ನ್ಯಾಯಾಲಯವು ಈ ಸಂಬಂಧ ವಿಚಾರಣೆ ನಡೆಸಲಿದೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದರು.
ಈ ಹಿಂದೆ, ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡ ಮಹೇಶ್ ಶ್ರೀಮಲ್ ಎಂಬುವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಹಾಜರಾಗುವಂತೆ ಸೂಚಿಸಿತ್ತು.
ಇದನ್ನೂ ಓದಿ:ದಂತಾ ಶಾಸಕನ ಮೇಲೆ ದಾಳಿ.. ಇದು ಬಿಜೆಪಿ ಗೂಂಡಾಗಳ ಕೃತ್ಯ ಎಂದ ರಾಹುಲ್ ಗಾಂಧಿ
ಪ್ರಕರಣ ಯಾವುದು?: ರಫೇಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ 2018 ರಲ್ಲಿ ಪ್ರಧಾನಿ ಮೋದಿ ಅವರನ್ನು ರಾಹುಲ್ ಗಾಂಧಿ 'ಕಮಾಂಡರ್-ಇನ್-ಥೀಫ್' ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿತ್ತು. ನಂತರ ರಾಹುಲ್ ಗಾಂಧಿ ತಮಗೆ ನೀಡಿದ್ದ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.