ಚೆನ್ನೈ (ತಮಿಳುನಾಡು): ಸನಾತನ ಧರ್ಮದ ಕುರಿತು ಉಂಟಾಗಿರುವ ವಿವಾದದ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಮದ್ರಾಸ್ ಹೈಕೋರ್ಟ್ಗೆ ತಿಳಿಸಿದ್ದಾರೆ. ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸಿತು.
ಸಚಿವ ಉದಯನಿಧಿ ಸ್ಟಾಲಿನ್ ಪರ ವಕೀಲ ವಿಲ್ಸನ್ ವಾದ ಮಂಡಿಸಿ, ತಮ್ಮ ಕಕ್ಷಿದಾರ ಉದಯನಿಧಿ ಸ್ಟಾಲಿನ್ ವಿರುದ್ಧ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ಪೈಕಿ ಅವರ ಅನರ್ಹತೆ ಕುರಿತು ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ಪರ ವಕೀಲರು ಹಾಜರಾಗಿರುವುದು ಬಿಜೆಪಿಯ ಕೈವಾಡ ಇರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಕಕ್ಷಿದಾರರ ವಿರುದ್ಧ ಸಲ್ಲಿಕೆಯಾಗಿರುವ ರಿಟ್ ಅರ್ಜಿ ರಾಜಕೀಯ ಪ್ರೇರಿತವಾಗಿದ್ದು, ಇದನ್ನು ವಜಾಗೊಳಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು.
ತಮಿಳುನಾಡಿನ ಮಣ್ಣಿನಲ್ಲಿ ಬಿಜೆಪಿ ತನ್ನ ರಾಜಕೀಯ ಸಿದ್ಧಾಂತವನ್ನು ಬಿತ್ತಲು ಪ್ರಯತ್ನಿಸುತ್ತಿದೆ. ಇದು ಇಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಿಂದ ಗೊತ್ತಾಗುತ್ತದೆ. ಅರ್ಜಿದಾರರು ಹಿಂದು ಮುನ್ನಾನಿಯ ಮುಖಂಡರಾಗಿದ್ದು, ಆರ್ಎಸ್ಎಸ್ ಮತ್ತು ಬಿಜೆಪಿ ಹಿನ್ನೆಲೆಯುಳ್ಳವರು ಎಂದು ನ್ಯಾಯಾಲಯದ ಗಮನ ಸೆಳೆದರು. 100 ವರ್ಷಗಳಿಗಿಂತಲೂ ಹಳೆಯದಾದ ದ್ರಾವಿಡ ಸಿದ್ಧಾಂತವನ್ನು ವಿರೋಧಿಸುವ ಒಂದು ನಿರ್ದಿಷ್ಟ ಸಿದ್ಧಾಂತವು ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.
ತಮಿಳುನಾಡಿನ ಬಹುಪಾಲು ಜನರು ದ್ರಾವಿಡ ಸಿದ್ಧಾಂತವನ್ನು ಪಾಲನೆ ಮಾಡುತ್ತಾರೆ. ಈ ಸಿದ್ಧಾಂತವನ್ನು ಪಾಲನೆ ಮಾಡುವ ಹಿನ್ನಲೆ ಜನರು ನನಗೆ ಮತ ಹಾಕಿದ್ದಾರೆ. ದ್ರಾವಿಡ ನಾಯಕರಾದ ಪೆರಿಯಾರ್, ಮಾಜಿ ಮುಖ್ಯಮಂತ್ರಿ ಪೆರಾರಿಗ್ನಾರ್ ಅಣ್ಣಾ, 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಡಿಎಂಕೆ ಕಾರ್ಯಕರ್ತರು ಈ ಸಿದ್ಧಾಂತದ ಮೇಲೆ ನಂಬಿಕೆಯನ್ನು ಇಟ್ಟಿಕೊಂಡಿದ್ದಾರೆ. ನಾವು ಕೂಡ ಈ ಸಿದ್ಧಾಂತದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ. ಜೊತೆಗೆ ಇತರ ಎಲ್ಲಾ ಧರ್ಮಗಳ ಬಗ್ಗೆ ಗೌರವ ಇದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.