ನವದೆಹಲಿ: 2022-23ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್ ಕುರಿತಂತೆ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೇಂದ್ರದ ವಿರೋಧ ಪಕ್ಷಗಳು ಬಜೆಟ್ ಅನ್ನು ಕಟುವಾಗಿ ಟೀಕಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಬಜೆಟ್‌ನ ಪ್ರಯೋಜನಗಳ ಕುರಿತು ಮನವರಿಕೆ ಮಾಡಲು ಬಿಜೆಪಿ ತಂಡ ಸಜ್ಜಾಗಿದೆ.
ದೇಶಾದ್ಯಂತ ಇರುವ ಬಿಜೆಪಿ ಸಂಸದರು ಮತ್ತು ಇತರ ನಾಯಕರು ಬಜೆಟ್‌ನ ಪ್ರಯೋಜನಗಳ ಬಗ್ಗೆ ತಮಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಫೆಬ್ರವರಿ 5,6 ಮತ್ತು ಫೆಬ್ರವರಿ 12,13ರಂದು ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬಜೆಟ್‌ನ ಪ್ರಯೋಜನಗಳನ್ನು ಎಲ್ಲ ರಾಜ್ಯಗಳ ಜನರಿಗೆ ವಿವರಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಪಕ್ಷದ ಹೈಕಮಾಂಡ್ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈಗ ಸಂಸದರು ಮತ್ತು ಇತರ ನಾಯಕರು ಫೆಬ್ರವರಿಯಲ್ಲಿ ನಿಗದಿಪಡಿಸಿದ ದಿನಾಂಕದಂದು ಸುದ್ದಿಗೋಷ್ಠಿಗಳನ್ನು ಕರೆದು, ಬಜೆಟ್‌ನ ಮಹತ್ವ ವಿವರಿಸಲಿದ್ದಾರೆ. ಇದರ ಜೊತೆಗೆ ಪಕ್ಷದ ಜಾಲತಾಣಗಳಲ್ಲಿ ಮತ್ತು ತಮ್ಮ ಜಾಲತಾಣಗಳ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಬುಧವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಭಾಷಣದಲ್ಲಿ ಬಜೆಟ್ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ವಿವರಣೆ ನೀಡಿದ್ದರು. ಈ ವೇಳೆ, ಭಾರತವು ಸ್ವಾವಲಂಬಿಯಾಗುವುದು ಬಹಳ ಮುಖ್ಯ. ಈಗ ಮಂಡನೆಯಾಗಿರುವ ಬಜೆಟ್ ಸ್ವಾವಲಂಬಿ ಭಾರತದ ತಳಹದಿಯ ಮೇಲೆ ಆಧುನಿಕ ಭಾರತವನ್ನು ನಿರ್ಮಿಸಲು ಮಾತ್ರ ಸಹಕಾರಿಯಾಗಿದೆ ಎಂದಿದ್ದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿ ಬೆಳವಣಿಗೆ ನೋಡಿ ಕೆಸಿಆರ್ ಭೀತಿಗೊಳಗಾಗಿದ್ದಾರೆ: ಡಿಕೆ ಅರುಣಾ ವಾಗ್ದಾಳಿ!