ಸಾಗರ್ (ಮಧ್ಯಪ್ರದೇಶ):ಚುನಾವಣೆಯ ವಿಚಾರಕ್ಕಾಗಿ ಕೊಲೆಯಾಗಿರುವ ಜಗದೀಶ್ ಯಾದವ್ ಎಂಬಾತನ ಪ್ರಕರಣದಲ್ಲಿ ಆರೋಪಿ ಮತ್ತು ಪಕ್ಷದಿಂದ ಅಮಾನತಾಗಿರುವ ಬಿಜೆಪಿ ಮುಖಂಡನ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ಸ್ಫೋಟಕ ಬಳಸಿ ನಿನ್ನೆ ರಾತ್ರಿ ನೆಲಸಮಗೊಳಿಸಿದೆ. ಕಳೆದ ವರ್ಷದ ಡಿಸೆಂಬರ್ 22 ರಂದು ಜಗದೀಶ್ ಯಾದವ್ ಅವರ ಮೇಲೆ ಎಸ್ಯುವಿ ಕಾರು ಹತ್ತಿಸಿ ಭೀಕರವಾಗಿ ಹತ್ಯೆಗೈದ ಆರೋಪ ಈ ಬಿಜೆಪಿ ಮುಖಂಡನ ಮೇಲಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಜೈರಾಮ್ ಪ್ಯಾಲೇಸ್ ಸಾಗರ್‌ನ ಮಕರೋನಿಯಾ ಪ್ರದೇಶದಲ್ಲಿರುವ ಬಿಜೆಪಿ ಮುಖಂಡನ ಹೋಟೆಲ್ ಅನ್ನು ಅಕ್ರಮ ಎಂದು ಗುರುತಿಸಿರುವ ಸರ್ಕಾರ, ಅದನ್ನು ತೆರವು ಮಾಡಲು ಸೂಚಿಸಿತ್ತು.
ಅದರಂತೆ, ಮಂಗಳವಾರ ರಾತ್ರಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇಂದೋರ್‌ನ ವಿಶೇಷ ತಂಡ 60 ಡೈನಮೈಟ್‌ಗಳನ್ನು ಸ್ಫೋಟಿಸಿ ಹೊಟೇಲ್ ಕೆಡವಿತು. ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ಧರೆಗುರುಳಿತು. ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ನೆಲಸಮದ ನೇತೃತ್ವದ ವಹಿಸಿದ್ದರು. 'ಕಟ್ಟಡ ತೆರವು ಮಾಡುವ ಬಗ್ಗೆ ಸುತ್ತಲಿನ ಎಲ್ಲ ನಿವಾಸಿಗಳಿಗೆ ಮಾಹಿತಿ ನೀಡಲಾಗಿತ್ತು. ಕಟ್ಟಡದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ವಾಹನ ಸಂಚಾರವನ್ನು ನಿಲ್ಲಿಸಲಾಗಿತ್ತು. ಸುತ್ತಮುತ್ತಲಿನ ಕಟ್ಟಡಗಳ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಯಾವುದೇ ರೀತಿಯ ಹಾನಿ ಉಂಟಾಗದಂತೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿ ದೀಪಕ್ ಆರ್ಯ ತಿಳಿಸಿದರು.