ನವದೆಹಲಿ: ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಕಾಲಾವಕಾಶ ವಿಸ್ತರಿಸುವಂತೆ ಕೋರಿ ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತು. ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. "ಶರಣಾಗತಿಯನ್ನು ಮುಂದೂಡಲು ಮತ್ತು ಜೈಲಿಗೆ ಹಿಂತಿರುಗಲು ಅರ್ಜಿದಾರರು ಉಲ್ಲೇಖಿಸಿದ ಕಾರಣಗಳು ಯಾವುದೇ ಅರ್ಹತೆಯನ್ನು ಹೊಂದಿಲ್ಲ" ಎಂದು ಪೀಠ ಹೇಳಿದೆ.
"ಶರಣಾಗತಿಗೆ ಸಮಯ ವಿಸ್ತರಣೆ ಕೋರಿ ಅಪರಾಧಿಗಳು ಉಲ್ಲೇಖಿಸಿರುವ ಕಾರಣಗಳು ಅರ್ಹತೆಯ ಕೊರತೆ ಹೊಂದಿವೆ" ಎಂದು ಹೇಳಿರುವ ನ್ಯಾಯ ಪೀಠ, ಜನವರಿ 8ರ ತೀರ್ಪಿನ ಪ್ರಕಾರ, "ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವು ಜ. 21ರೊಳಗೆ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು" ಎಂದೂ ತಿಳಿಸಿದೆ.
2002ರ ಗುಜರಾತ್ ಕೋಮು ಗಲಭೆಯ ವೇಳೆ, ಕೊಲೆ ಮತ್ತು ಸಾಮೂಹಿಕ ಅತ್ಯಾಚಾರಗೈದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಸರ್ಕಾರವು ನೀಡಿದ್ದ ಈ ಆದೇಶಗಳನ್ನು ಸುಪ್ರೀಂ ಕೋರ್ಟ್ ಜನವರಿ 8ರಂದು ರದ್ದುಗೊಳಿಸಿತ್ತು. "ಅವಧಿಗೆ ಮುನ್ನ ಬಿಡುಗಡೆ ಮಾಡಲು ಗುಜರಾತ್ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹಾಗಾಗಿ ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಪ್ರಕರಣದ 11 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜನವರಿ 8ರಂದು ಆದೇಶಿಸಿತ್ತು". ಇವರಲ್ಲಿ ಮೂವರು ಅಪರಾಧಿಗಳು ಅನಾರೋಗ್ಯ, ಚಳಿಗಾಲದ ಬೆಳೆ ಕೊಯ್ಲು ಹಾಗೂ ಮಗನ ಮದುವೆಯಂತಹ ಕಾರಣಗಳನ್ನು ನೀಡಿ ಶರಣಾಗತಿಗೆ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಇದನ್ನೂ ಓದಿ: ಬಿಲ್ಕಿಸ್ ಬಾನೊ ಕೇಸ್: ಶರಣಾಗಲು ಸಮಯ ಕೋರಿ ಸುಪ್ರೀಂಕೋರ್ಟ್ಗೆ ಅಪರಾಧಿಗಳಿಂದ ಅರ್ಜಿ
2002 ರಲ್ಲಿ ನಡೆದ ಗೋಧ್ರಾ ಗಲಭೆಗಳ ಸಮಯದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಸದಸ್ಯರನ್ನು ಕೊಲೆ ಮಾಡಲಾಗಿತ್ತು. ದಾಳಿ ವೇಳೆ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು.