ನಳಂದಾ (ಬಿಹಾರ) :ಬಿಹಾರದ ನಳಂದಾ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಮಗಧ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ಮಧ್ಯೆ ಇನ್ನೇನು ಡಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ಹಠಾತ್ ಬ್ರೇಕ್ ಹಾಕಲಾಗಿದೆ. ಇದರಿಂದ ನೂರಾರು ಜನರಿದ್ದ ರೈಲು ಸಂಭವನೀಯ ಅಪಘಾತದಿಂದ ಪಾರಾಗಿದೆ.
ನವದೆಹಲಿಯಿಂದ ಹೊರಟಿದ್ದ ಮಗಧ ಎಕ್ಸ್‌ಪ್ರೆಸ್ ರೈಲು ಪಾಟ್ನಾ ಮೂಲಕ ಇಸ್ಲಾಂಪುರಕ್ಕೆ ತೆರಳುತ್ತಿತ್ತು. ಹಾದಿ ಮಧ್ಯೆ ಬಿಹಾರದ ನಳಂದಾ ಜಿಲ್ಲೆಯ ಹಿಲ್ಸಾ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ, ಅದೇ ಮಾರ್ಗವಾಗಿ ಗೂಡ್ಸ್ ರೈಲೊಂದು ಇಸ್ಲಾಂಪುರದಿಂದ ದಹಿಯಾವಾನ್ ಕಡೆಗೆ ಬರುತ್ತಿತ್ತು. ಸರಕನ್ನು ಸಾಗಿಸುತ್ತಿದ್ದ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಮಗಧ ಎಕ್ಸ್‌ಪ್ರೆಸ್ ರೈಲಿನ ಪಕ್ಕದಲ್ಲೇ ದಿಢೀರ್ ಬ್ರೇಕ್ ಹಾಕಿ ನಿಂತಿದೆ.
ಎರಡೂ ರೈಲುಗಳಿಗೆ ಒಂದೇ ಮಾರ್ಗ:ವಿಚಿತ್ರ ಎಂದರೆ, ಎರಡೂ ರೈಲುಗಳಿಗೆ ಹಿಲ್ಸಾ ಸ್ಟೇಷನ್ನಲ್ಲಿ ಒಂದೇ ಮಾರ್ಗದ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಗಧ ರೈಲು ಬಂದು ನಿಂತಿದೆ. ಹಾಗಿದ್ದಾಗ್ಯೂ ಗೂಡ್ಸ್ ರೈಲಿಗೂ ಅದೇ ಹಳಿಯನ್ನು ಸ್ಟೇಷನ್ ಮಾಸ್ಟರ್ ಸೂಚಿಸಿದ್ದಾರೆ. ಹೀಗಾಗಿ ಎರಡೂ ರೈಲುಗಳು ಒಂದೇ ಹಳಿಗೆ ಬಂದಿದ್ದರಿಂದ ಚಾಲಕನ ಬುದ್ಧಿವಂತಿಕೆಯಿಂದಾಗಿ ಅಪಘಾತವಾಗುವ ಮುನ್ನ ತಪ್ಪಿಸಿಕೊಂಡಿವೆ.
ರೈಲ್ವೇ ಸ್ಟೇಷನ್ ಮಾಸ್ಟರ್ ಕಾರಣ:ಗೂಡ್ಸ್ ರೈಲು ದಿಢೀರ್ ಮಗಧ ಎಕ್ಸ್‌ಪ್ರೆಸ್ ಹಿಂದೆಯೇ ಬಂದು ನಿಂತಾಗ ಭಯಗೊಂಡ ಪ್ರಯಾಣಿಕರು ಓಡಿ ಹೋಗಿದ್ದಾರೆ. ಬಳಿಕ ಆಘಾತಗೊಂಡ ಪ್ರಯಾಣಿಕರು ಹಳಿಯ ಮೇಲೆ ಬಂದು ಗಲಾಟೆ ಮಾಡಿದ್ದಾರೆ. ರೈಲ್ವೆ ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಲಿತ್ತು. ಆದರೆ, ಚಾಲಕನ ಮುನ್ನೆಚ್ಚರಿಕೆಯಿಂದ ಅನಾಹುತ ತಪ್ಪಿದೆ. ಇಲ್ಲವಾದಲ್ಲಿ ಛತ್ ಪೂಜೆಗೆ ಹೊರಟಿದ್ದ ನೂರಾರು ಪ್ರಯಾಣಿಕರಿದ್ದ ರೈಲು ದುರಂತಕ್ಕೀಡಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಲ್ಸಾ ಮತ್ತು ಜೂನಿಯರ್ ರೈಲ್ವೇ ಹಾಲ್ಟ್ ನಡುವಿನ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಗೂಡ್ಸ್ ರೈಲು ನಿಧಾನವಾಗಿ ಚಲಿಸುತ್ತಿದ್ದು, ಹೀಗಾಗಿ ಎದುರುಗಡೆ ಮಗಧ ಎಕ್ಸ್‌ಪ್ರೆಸ್ ಕಂಡ ತಕ್ಷಣವೇ ಗೂಡ್ಸ್ ರೈಲಿನ ಚಾಲಕ ಬ್ರೇಕ್ ಹಾಕಿದ್ದಾನೆ. ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸಲಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಪ್ಪು ಮಾಡಿದ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಚೆಗೆ ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯಲ್ಲಿ ರೈಲ್ವೆ ಅಧಿಕಾರಿಗಳು ಹಳಿಯ ಮೇಲೆ ಕಲ್ಲು, ಬಂಡೆ ಮತ್ತು ರಾಡ್ಗಳನ್ನು ಪತ್ತೆ ಹಚ್ಚಿ ಉದಯಪುರದಿಂದ ಜೈಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ಅಪಘಾತವನ್ನು ತಪ್ಪಿಸಿದ್ದರು.
ಇದನ್ನೂ ಓದಿ:ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು