ಥಾಣೆ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಶನಿವಾರ ಸಂಭವಿಸಿದ್ದ ಮೂರು ಅಂತಸ್ತಿನ ಗೋಡೌನ್ (ಉಗ್ರಾಣ ಕಟ್ಟಡ) ಕುಸಿತ ಘಟನೆಯಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳದಲ್ಲಿ ಭಾನುವಾರ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆಯಿತು. ಅವಶೇಷಗಳಡಿ ಸಿಲುಕಿದ್ದ 40 ವರ್ಷದ ವ್ಯಕ್ತಿಯೊಬ್ಬರನ್ನು 20 ಗಂಟೆಗಳ ನಂತರ ರಕ್ಷಣೆ ಮಾಡಲಾಗಿದೆ.
ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನ ವಾಲ್ಪಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಗೋಡೌನ್ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಸ್ಥಳದಲ್ಲಿ ಕೆಲಸ ಮಾಡಿಕೊಂಡು, ವಾಸವಾಗಿದ್ದ ಅಂದಾಜು 20ಕ್ಕೂ ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯ ಶುರು ಮಾಡಿದ್ದರು.
ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಇದುವರೆಗೆ 13 ಮಂದಿಯನ್ನು ಸ್ಥಳಾಂತರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಗಾಯಗೊಂಡಿರುವ 10 ಜನರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೊಂದೆಡೆ, ನಿನ್ನೆಯಿಂದ ಅವಶೇಷಗಳಿಂದ ಸಿಕ್ಕು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸುನಿಲ್ ಪಿಸಲ್ ಎಂಬಾತನನ್ನು ಇಂದು ಬೆಳಗ್ಗೆ ರಕ್ಷಣಾ ಪಡೆಗಳು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿವೆ. ಆತನನ್ನು ಭಿವಂಡಿಯ ಐಜಿಎಂ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮದನ್ ಬಲ್ಲಾಳ್ ತಿಳಿಸಿದ್ದಾರೆ.
ಗಾಜಿನ ಮಧ್ಯೆ ಸಿಲುಕಿದ್ದ ವ್ಯಕ್ತಿ: ಸುನಿಲ್ ಭಿವಾಂಡಿ ನಗರದ ಫುಲೆ ನಗರದಲ್ಲಿ ವಾಸಿಸುತ್ತಿದ್ದು, ತನ್ನ ಕುಟುಂಬವನ್ನು ಪೋಷಿಸಲು ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಟ್ಟಡ ಕುಸಿತ ಘಟನೆ ನಡೆದಾಗ ಕೂಡ ಎಂದಿನಂತೆ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಕಟ್ಟಡ ಉರುಳಿಬಿದ್ದ ಅನುಭವವಾಗಿದೆ. ಬಳಿಕ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಗೋಡೌನ್ನಲ್ಲಿದ್ದ ದಪ್ಪ ಗಾಜಿನ ಬಿರುಕಿನ ಮಧ್ಯೆ ರಕ್ಷಿಸಿಕೊಂಡಿದ್ದರು. ಅವಶೇಷಗಳು ಮೈಮೇಲೆ ಬಿದ್ದು ಅಲ್ಲಿಯೇ ಸಿಲುಕಿಕೊಂಡಿದ್ದರು. 20 ಗಂಟೆಗಳ ಕಾಲ ಆಹಾರ, ನೀರು ಇಲ್ಲದೆ ಹೊರಬರಲು ಪರಿತಪಿಸುತ್ತಿದ್ದರು ಎಂದು ಎನ್‌ಡಿಆರ್‌ಎಫ್ ಕಮಾಂಡರ್ ದೀಪಕ್ ತಿವಾರಿ ಹೇಳಿದ್ದಾರೆ.
ಜನ್ಮದಿನದಂದೇ ಸಿಕ್ತು ಮರು ಹುಟ್ಟು!: ಶನಿವಾರದಿಂದ ನಿರಂತರವಾಗಿ ಕಾರ್ಯಾಚರಣೆ ಮುಂದುವರೆದಿದೆ. ಇಡೀ ರಾತ್ರಿ ಕೂಡ ಪರಿಹಾರ ಕಾರ್ಯ ಮಾಡುತ್ತಿದ್ದು, ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ತಂಡದ ಕಾರ್ಯಾಚರಣೆ ವೇಳೆ ಅವಶೇಷಗಳಿಂದ ಸುನಿಲ್ ಧ್ವನಿ ಕೇಳಿ ಬಂತು. ಆದ್ದರಿಂದ ವ್ಯಕ್ತಿ ಬದುಕಿದ್ದಾನೆಂದು ಅರಿತು ಜಾಗ್ರತೆಯಿಂದ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ನಿನ್ನೆಯೇ ಸಂದೀಪ್ನ ಜನ್ಮದಿನ ಇತ್ತು ಎಂದೂ ತಿಳಿದು ಬಂದಿದೆ. ಸದ್ಯ ಕಟ್ಟಡದ ಅವಶೇಷಗಳಲ್ಲಿ ಇನ್ನೂ 7 ರಿಂದ 8 ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕೆ ಇದೆ. ಆ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿ ಇದೆ ಎಂದು ತಿವಾರಿ ವಿವರಿಸಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ. ಶನಿವಾರ ತಡರಾತ್ರಿಯೇ ಭಿವಂಡಿಯ ಐಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಿಎಂ ಭೇಟಿ ಮಾಡಿ, ಅರೋಗ್ಯ ವಿಚಾರಿಸಿದ್ದಾರೆ. ಕಟ್ಟಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಮೂರು ಅಂತಸ್ತಿನ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ