ಭೋಪಾಲ್:ಸಂಬಂಧಿಕರೊಂದಿಗೆ ಸೇರಿ ಮಾಜಿ ಪತ್ನಿ ಅಪಹರಣ ಮಾಡಿ ವಿಷಪೂರಿತ ಆಹಾರ ತಿನ್ನಿಸಿ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್ನಿಂದ ಪಶ್ಚಿಮಕ್ಕೆ 293 ಕಿ.ಮೀ. ದೂರದಲ್ಲಿರುವ ರತ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊದಲು ಮಹಿಳೆಯನ್ನು ಅಪಹರಣ ಮಾಡಿರುವ ಕಾಮುಕರು, ಅತ್ಯಾಚಾರವೆಸಗುವುದಕ್ಕೂ ಮುಂಚಿತವಾಗಿ ಮದ್ಯ ಸೇವನೆ ಮಾಡಿದ್ದಾರೆ. ತದನಂತರ ಆಕೆಗೆ ವಿಷಪೂರಿತ ಆಹಾರ ತಿನ್ನಿಸಿ ಅತ್ಯಾಚಾರವೆಸಗಿದ್ದು, ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಸೋಮವಾರ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ರಸ್ತೆ ಬದಿಯಲ್ಲಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ಸಂತ್ರಸ್ತೆಯ ಎರಡನೇ ಗಂಡನೊಂದಿಗೆ ಮೊದಲನೇ ಗಂಡ ಜಗಳ ಮಾಡಿಕೊಂಡಿದ್ದ. ಇದಕ್ಕೆ ಮಹಿಳೆ ಪ್ರಮುಖ ಸಾಕ್ಷಿಯಾಗಿದ್ದಳು. ಈ ವೇಳೆ ಯಾವುದೇ ಸಾಕ್ಷಿ ಹೇಳದಂತೆ ಆಕೆಗೆ ಮೊದಲ ಗಂಡ ಕೇಳಿಕೊಂಡಿದ್ದ. ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಹೀಗಾಗಿ ಮಾಜಿ ಪತಿ ಹಾಗೂ ನಾಲ್ವರು ಸಂಬಂಧಿಕರು ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಜತೆಗೆ ಮಹಿಳೆಯ ದೇಹದ ಕೆಲ ಭಾಗಗಳಿಗೆ ಸಿಗರೇಟ್ನಿಂದ ಸುಟ್ಟಿದ್ದಾರೆ ಎನ್ನಲಾಗಿದೆ.
ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.