ಬಾಲಿವುಡ್ನಲ್ಲಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿ ಮಿಂಚಿದ್ದ ನಟಿ ಉರ್ಮಿಳಾ ಮಾತೋಂಡ್ಕರ್ ಸದ್ಯ ರಾಜಕಾರಣಿ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದ ಈ ರಂಗೀಲಾ, ಮುಂಬೈನ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಬಣ್ಣದ ಲೋಕ ಬಿಟ್ಟು ರಾಜಕಾರಣಕ್ಕೆ ಧುಮುಕಿರುವ ಇವರು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಗೋಪಾಲ್ ಶೆಟ್ಟಿಗೆ ಸೋಲಿನ ರುಚಿ ತೋರಿಸಲು ರಣತಂತ್ರ ಹೆಣೆದಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ತುಂಬೆಲ್ಲಾ ಓಡಾಡಿ ಭರ್ಜರಿ ಪ್ರಚಾರ ನಡೆಸಿದ್ದರು. ಹೈಕಮಾಂಡ್ ನಾಯಕರ ಬೆಂಬಲವು ಉರ್ಮಿಳಾಗೆ ಇದ್ದು, ಗೆಲುವಿನ ಉತ್ಸಾಹದಲ್ಲಿದ್ದಾರೆ.
ಇತ್ತ ಒಂದು ಬಾರಿ ಎಂಎಲ್ಎ ಆಗಿದ್ದ ಗೋಪಾಲ್ ಶೆಟ್ಟಿ 2014 ರ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಕೆಲವೊಂದು ವಿವಾದಾತ್ಮಕ ಹೇಳಿಕೆ ನೀಡಿ ಕ್ಷೇತ್ರದ ಜನರ ಕೆಂಗೆಣ್ಣಿಗೂ ಗುರಿಯಾಗಿದ್ದ ಗೋಪಾಲ್, ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಧರ್ಮದವರು ಪಾಲ್ಗೊಂಡಿರಲಿಲ್ಲವೆಂದು ಆರೋಪಿಸಿದ್ದರು. ಅದರಂತೆ ರೈತರ ಆತ್ಮಹತ್ಯೆ ಬಗ್ಗೆ ಇವರು ಮಾತಾಡಿದ್ದು ಕೂಡ ಕಾಂಟ್ರವರ್ಸಿಯಾಗಿತ್ತು. ಇದೀಗ ಮರು ಆಯ್ಕೆ ಬಯಸಿ ಚುನಾವಣೆ ಎದುರಿಸಿದ್ದಾರೆ.
ಮುಂಬೈ ನಾರ್ಥ್ ಲೋಕಸಭಾ ಕ್ಷೇತ್ರ ಆರು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಇವುಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಶಿವಸೇನಾ ಹಾಗೂ ಕಾಂಗ್ರೆಸ್ನ ತಲಾ ಒಬ್ಬೊಬ್ಬರು ಎಂಎಲ್ಎಗಳಿದ್ದಾರೆ.
ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಆರು ಬಾರಿ ಗೆಲುವು ಪಡೆದಿದೆ. 1989, 1991, 1996, 1998, 1999 ಹಾಗೂ 2014ರಲ್ಲಿ ಕಮಲ ಅರಳಿದೆ. ಐದು ಬಾರಿ ಕಾಂಗ್ರೆಸ್ ( 1957, 1962, 1984, 2004, 2009), ಸಿಪಿಐ ( 1952), ಭಾರತೀಯ ಲೋಕ್ ದಳ ( 1977), ಜನತಾ ಪಾರ್ಟಿ (1980 ) ತಲಾ ಒಂದೊಂದು ಬಾರಿ ಮುಂಬೈ ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.