ಮಧುಮೇಹ ಅಥವಾ ಡಯಾಬಿಟೀಸ್ ಎಂಬುದು ಇಂದು ವಿಶ್ವವನ್ನು ಅತಿ ಹೆಚ್ಚು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಾದ್ಯಂತ ಪ್ರತಿವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ಈ ಮಧುಮೇಹ ದಿನವನ್ನು ಎಂದಿನಿಂದ ಆಚರಿಸಲು ಆರಂಭಿಸಲಾಯಿತು, ಇದರ ಉದ್ದೇಶಗಳೇನು ಹಾಗೂ ಇದರ ಇತಿಹಾಸದ ಬಗ್ಗೆ ಒಂದಿಷ್ಟು ತಿಳಿಯೋಣ.
1991 ರಿಂದ ಆಚರಿಸಲಾಗುತ್ತಿದೆ ವಿಶ್ವ ಮಧುಮೇಹ ದಿನ
ಐಡಿಎಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಜಂಟಿ ಯೋಜನೆಯ ಅಂಗವಾಗಿ 1991 ರಿಂದ ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತಿದೆ. ಮಧುಮೇಹದಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆ ಆರಂಭಿಸಲಾಗಿದೆ. ನಂತರ 2006 ರಲ್ಲಿ ವಿಶ್ವ ಸಂಸ್ಥೆಯು ಈ ದಿನಾಚರಣೆಯನ್ನು ಅನುಮೋದಿಸಿದ ನಂತರ ಈ ದಿನವು ವಿಶ್ವಸಂಸ್ಥೆ ಮಾನ್ಯತೆ ನೀಡಿದ ಅಧಿಕೃತ ದಿನಾಚರಣೆಯಾಯಿತು.
ಸರ್ ಫ್ರೆಡರಿಕ್ ಬಾಂಟಿಂಗ್
1922 ರಲ್ಲಿ ಸರ್ ಫ್ರೆಡರಿಕ್ ಬಾಂಟಿಂಗ್ ಎಂಬುವರು ಮತ್ತೋರ್ವ ವಿಜ್ಞಾನಿ ಚಾರ್ಲ್ಸ್ ಬೆಸ್ಟ್ ಎಂಬುವರೊಂದಿಗೆ ಜೊತೆಗೂಡಿ ಮಧುಮೇಹಕ್ಕೆ ಅಗತ್ಯ ಚಿಕಿತ್ಸೆಯಾದ ಇನ್ಸುಲಿನ್ ಅನ್ನು ಕಂಡುಹಿಡಿದರು. ಇದೇ ಸರ್ ಫ್ರೆಡರಿಕ್ ಬಾಂಟಿಂಗ್ ಅವರ ಜನ್ಮದಿನವಾದ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತಿದೆ.
ಮಧುಮೇಹದ ಇತಿಹಾಸ
ಕ್ರಿಸ್ತಶಕ ಪೂರ್ವ 1550 ರಿಂದ ಮಾನವ ಕುಲಕ್ಕೆ ಡಯಾಬಿಟೀಸ್ ರೋಗದ ಬಗ್ಗೆ ತಿಳಿದಿದೆ. ಆದರೆ ಇದಕ್ಕೆ ಇನ್ಸುಲಿನ್ ಔಷಧಿಯನ್ನು ಯಶಸ್ವಿಯಾಗಿ ಕಂಡುಹಿಡಿದದ್ದು 1922 ರಲ್ಲಿ. ಹೀಗಾಗಿ ಅಷ್ಟು ಹಳೆಯ ಕಾಲದಲ್ಲೇ ಡಯಾಬಿಟೀಸ್ ಪತ್ತೆಯಾದರೂ ಅದರ ಬಗ್ಗೆ ನಮಗಿರುವ ಜ್ಞಾನ ತೀರಾ ಇತ್ತೀಚಿನದು ಎಂದೇ ಹೇಳಬಹುದು.
ಇನ್ನು 1850 ರ ಹೊತ್ತಿಗೆ ವೈದ್ಯ ವಿಜ್ಞಾನಿಗಳು ಟೈಪ್ 1 ಹಾಗೂ ಟೈಪ್ 2 ಮಧುಮೇಹ ಇರುವುದಾಗಿ ಪತ್ತೆ ಹಚ್ಚಿದರು. ಅಲ್ಲಿಂದೀಚೆಗೆ ಇಂದು ಜಗತ್ತಿನಲ್ಲಿ ಶೇ 90ರಷ್ಟು ಟೈಪ್ 2 ಮಧುಮೇಹಿಗಳೇ ಇದ್ದು, ವಿಶ್ವಾದ್ಯಂತ ಇವರ ಸಂಖ್ಯೆ 425 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಪ್ರಯತ್ನಿಸಿದಲ್ಲಿ ಮಧುಮೇಹ ಬರದಂತೆ ತಡೆಗಟ್ಟಬಹುದಾಗಿರುವುದರಿಂದಲೇ ಇದರ ಬಗ್ಗೆ ಜಾಗೃತಿ ಮೂಡಿಸಲು ಐಡಿಎಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ.
ಮಧುಮೇಹ ಹಾಗೂ ಅದರ ಬಗೆಗಿನ ಸಂಶೋಧನೆಗಳು
1674 ರಲ್ಲಿ ವೈದ್ಯರು ರೋಗಿಯ ಒಂದೆರಡು ಹನಿ ಮೂತ್ರವನ್ನು ನಾಲಿಗೆಯಿಂದ ರುಚಿ ನೋಡುವ ಮೂಲಕ ಮಧುಮೇಹವನ್ನು ಪತ್ತೆ ಮಾಡುತ್ತಿದ್ದರು.