ನವದೆಹಲಿ:ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಮಾಡೋದಕ್ಕೆ ದುಷ್ಕರ್ಮಿಗೆ ದುಡ್ಡು ಕೊಟ್ಟಿದ್ದು ಯಾರು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸಂಸತ್ತಿಗೆ ತೆರಳುವ ಮುನ್ನ ಮಾತನಾಡಿದ ಅವರು, ಜಾಮಿಯಾ ವಿದ್ಯಾರ್ಥಿಗಳ ಮೇಲೆ ವ್ಯಕ್ತಿಯೋರ್ವ ಫೈರಿಂಗ್ ಮಾಡಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಬಲಪಂಥೀಯ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಹುತಾತ್ಮರ ದಿನದಂದು ನಾನು ಹಿಂಸೆ ಬೋಧಿಸುವುದಿಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಎಂತಹ ಸಂಕಷ್ಟದ ಸ್ಥಿತಿಯಲ್ಲೂ ಯಾರ ಬಳಿಯೂ ಕೈ ಚಾಚಬೇಡ ಎಂದು ಮಾತ್ರ ನಾನು ಬೋಧಿಸುತ್ತೇನೆ ಎಂಬ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ರಾಹುಲ್ ಟ್ವೀಟ್ ಮಾಡಿದ್ದರು.
ಫೈರಿಂಗ್ ನಡೆದಾಗಿನಿಂದ ಜಾಮಿಯಾ ವಿವಿ ಆವರಣದಲ್ಲಿ ವಾತಾವರಣ ಉದ್ವಿಗ್ನವಾಗಿದೆ. ಸಾವಿರಾರು ಮಂದಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಫೈರಿಂಗ್ನಲ್ಲಿ ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಫೈರಿಂಗ್ ಮಾಡಿದ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.