ಹೈದರಾಬಾದ್:ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇದೇ ಡಿಸೆಂಬರ್ 9 ರಂದು ಮಿಂಚಿನ ದಾಳಿ ನಡೆಸಿದ್ದ ಮಾದಕವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ಮಲಾನಾ ಕ್ರೀಮ್ ಸಾಗಣೆ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಅತಿ ದೊಡ್ಡ ಡ್ರಗ್ ಡೀಲರ್ ಅಜಂ ಶೇಕ್ ಜುಮ್ಮಾನ್ ರನ್ನು ಬಂಧಿಸಿತ್ತು. ಈ ವೇಳೆ, 5 ಕೆಜಿ ಮಲಾನಾ ಕ್ರೀಮ್, ಮೈಮರೆಸುವ ಮಾತ್ರಗಳು, ಅಫೀಮು ಹಾಗೂ 14 ಲಕ್ಷ ಹಣವನ್ನು ಸೀಜ್ ಮಾಡಿದ್ದರು.
ಎನ್‌ಸಿಬಿ ಮೂಲಕಗಳ ಪ್ರಕಾರ ಬಂಧಿತ ಆರೋಪಿ ಅಜಂ ಶೇಕ್ ಹಿಮಾಚಲ ಪ್ರದೇಶದಿಂದ ಡ್ರಗ್ ಅನ್ನು ನೇರವಾಗಿ ತಂದು ಬಳಿಕ ದೊಡ್ಡ ದೊಡ್ಡ ಡೀಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯ ಬಳಿಯಿದ್ದ 2.5 ಕೋಟಿ ಮೌಲ್ಯದ ಡ್ರಗ್ ಅನ್ನು ಎನ್‌ಸಿಬಿ ಸೀಜ್ ಮಾಡಿದೆ. ಮಾತ್ರವಲ್ಲದೇ ಪ್ರಕರಣ ಸಂಬಂಧ ಈವರೆಗೆ 28 ಮಂದಿಯನ್ನು ಬಂಧಿಸಲಾಗಿದೆ.
ಏನಿದು ಮಲಾನಾ ಕ್ರೀಮ್?
ಸಾಮಾನ್ಯವಾಗಿ ಮಲಾನಾ ಎಂಬುದು ಮಾದಕ ವಸ್ತುವಾಗಿದ್ದು, ಇದನ್ನು ಮಲಾನಾ ಚರಸ್ ಅಂತಲೂ ಕರೆಯಲಾಗುತ್ತದೆ. ಹೊರ ದೇಶಗಳಲ್ಲಿ ಇದನ್ನು ಬ್ಲಾಕ್ ಗೋಲ್ಡ್ ಎನ್ನಲಾಗುತ್ತದೆ. ಮಲಾನಾ ಹಿಮಾಚಲ ಪ್ರದೇಶದಲ್ಲಿರುವ ಒಂದು ಹಳ್ಳಿ. ವಿಶೇಷ ಎಂದರೆ ಇಲ್ಲಿಗೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಎಲ್ಲಿದೆ ಮಲಾನಾ?
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಗ್ರಾಮವೇ ಈ ಮಲಾನಾ. ಇಲ್ಲಿನ ಕಣಿವೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಕ್ಯಾನಬಿಸ್ ಬೆಳೆಯುತ್ತದೆ. ಜೊತೆಗೆ ಕೆಲವರು ಕಾನೂನು ಬಾಹಿರವಾಗಿ ಇದನ್ನು ಬೆಳೆಯುತ್ತಾರೆ. ಕಣಿವೆ ಪ್ರದೇಶದಲ್ಲಿರುವ ಏಕೈಕ ಗ್ರಾಮವಾಗಿರುವ ಮಲಾನಾದಲ್ಲಿ ಹಿಮಾಚಲ ಪ್ರದೇಶದ ಇತರ ಭಾಗಗಳಿಗಿಂತ ಹೆಚ್ಚಾಗಿ ಈ ಮಾದಕವನ್ನು ಬೆಳೆಯಲಾಗುತ್ತದೆ.
ಕ್ಯಾನಬಿಸ್ ಹೆಚ್ಚಿನ ರಾಸಾಯನಿಕಗಳನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ಕ್ಯಾನಾಬಿನಾಯ್ಡ್ಸ್ ಎಂತಲೂ ಕರೆಯಲಾಗುತ್ತದೆ. ಮನುಷ್ಯನ ದೇಹವನ್ನು ಹೆಚ್ಚು ಚುರುಕುಗೊಳಿಸುವಂತಹ ಟೆಟ್ರಾಹೈಡ್ರೊ ಕ್ಯಾನಬಿನಾಲ್ (ಟಿಹೆಚ್‌ಸಿ) ಅಂಶ ಇದರಲ್ಲಿ ಇರುತ್ತದೆ. ಹೀಗಾಗಿ ಇದನ್ನು ಕೈಗಾರಿಕೆಗಳು ಮತ್ತು ಔಷಧ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತದೆ. ಹಗ್ಗ, ಪೇಪರ್, ಬಟ್ಟೆ ತಯಾರಿಕೆಗೂ ಇದನ್ನು ಉಪಯೋಗಿಸುತ್ತಾರೆ. ತನ್ನ ಗುಣಮಟ್ಟದಿಂದಲೇ ಇಡೀ ವಿಶ್ವದಲ್ಲಿ ಮಲಾನಾ ಕ್ರೀಮ್ ಹೆಸರುವಾಸಿಯಾಗಿದೆ. ಇದು ಟೆಟ್ರಾಹೈಡ್ರೊ ಕ್ಯಾನಬಿನಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯೂ ಇದೆ.
ದುಬಾರಿ ಬೆಲೆಯ ಮಲಾನಾ ಕ್ರೀಮ್
ಸಾಮಾನ್ಯವಾಗಿ ಎಲ್ಲೆಡೆ ವಿವಿಧ ರೀತಿಯ ಮಲಾನಾ ಕ್ರೀಮ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಇದರ ಬೆಲೆ 10 ಗ್ರಾಂಗೆ 1,500 ರಿಂದ 8,000 ರೂಪಾಯಿ ವರೆಗೆ ಇದೆ. ಗುಣಮಟ್ಟದ ಆಧಾರದಲ್ಲೂ ಬೆಲೆ ನಿಗದಿ ಮಾಡಲಾಗುತ್ತದೆ. ವಿದೇಶದಲ್ಲಿ ಭಾರಿ ಬೇಡಿಕೆ ಇದ್ದು, ನೆದರ್ಲ್ಯಾಂಡ್ ರಾಜಧಾನಿ ಆಮಸ್ಟರ್ಡ್ಯಾಂ ನಲ್ಲಿ 11.4 ಗ್ರಾಂ ಮಲಾನಾಗೆ 250 ಡಾಲರ್ ಇದೆ.
ಮಲಾನಾ ಕ್ರೀಮ್ ಮಾರಾಟಕ್ಕೆ ಅವಕಾಶ!
ಕುಲ್ಲು ಜಿಲ್ಲೆಯಲ್ಲಿರುವ ಮಲಾನಾ ರಿಮೋಟ್ ಪ್ರದೇಶವಾಗಿದೆ. 20ನೇ ಶತಮಾನದ 50 ವರ್ಷಗಳ ಬಳಿಕ ಇದನ್ನು ಕಂಡು ಹಿಡಿಯಲಾಯಿತು. ಮೊದಲು ಪೂರ್ವಭಾಗದಲ್ಲಿ ಬಳಕೆಗೆ ಲಭ್ಯವಾಯಿತು. ಡ್ರಗ್ ಟೂರಿಸಂ ಎಂತಲೇ ಕರೆಯುತ್ತಿದ್ದ ಪಾರ್ವತಿ ಕಣಿವೆಯ ಸಮೀಪದಲ್ಲೇ ಇದನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಈ ಪ್ರದೇಶದಲ್ಲಿ ಅತಿ ಸುಲಭವಾಗಿ ಮಲಾನಾ ಸಿಗುತ್ತಿತ್ತು. 2007ರಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆ ಮಾರ್ಗ ನಿರ್ಮಾಣವಾದ ನಂತರ ಇಲ್ಲಿ ಹೆಚ್ಚು ಪ್ರಾದೇಶಿಕ ಪ್ರವಾಸೋದ್ಯಮ ಆಕರ್ಷಿತಗೊಂಡಿತು. ಎನ್‌ಸಿಬಿ ಪ್ರಕಾರ ಮಲಾನಾ ಕ್ರೀಮ್ ಬಳಕೆ ಗಂಭೀರವಾದ ಅಪರಾಧ ಮತ್ತು 20 ವರ್ಷ ಜೈಲು ಶಿಕ್ಷೆ ಹಾಗೂ ಕೆಲ ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಭಾರತದಲ್ಲಿ ಕ್ಯಾನಬಿಸ್ ಮಾರಾಟಕ್ಕಿದೆಯಾ ಅವಕಾಶ?
ಭಾರತದಲ್ಲಿ ಟೆಟ್ರಾಹೈಡ್ರೊ ಕ್ಯಾನಬಿನಾಲ್ ಅನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತದೆ. 1985ರಲ್ಲಿ ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟ್ಯಾನ್ಸ್ ಆ್ಯಕ್ಟ್ ಜಾರಿಗೆ ಬಂದ ಮೇಲೆ ಈ ಮಾದಕ ವಸ್ತುವಿನ ಮಾರಾಟ ಅಪರಾಧಗೊಳಿಸಲಾಯಿತು. ಆದರೂ ಹೋಲಿ ಮತ್ತು ಶಿವರಾತ್ರಿ ಹಬ್ಬಗಳ ವೇಳೆ ಕ್ಯಾನಬಿಸ್ ಅನ್ನು ಅತಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೂ ಮಲಾನಾಗೂ ಏನು ಸಂಬಂಧ?
ಇದೇ ವರ್ಷದ ಜೂನ್‌ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದರು. ಮಾದಕವಸ್ತುಗಳ ನಿಯಂತ್ರಣ ದಳ - ಎನ್‌ಸಿಬಿ ಕೂಡ ಡ್ರಗ್ಸ್ ಸೇವನೆ ಸಾಧ್ಯತೆ ಇರಬಹುದೆಂಬ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಂಡಾಗ ಸುಶಾಂತ್ ಸಿಂಗ್ ವಾಟ್ಸ್ಆ್ಯಪ್ ಚಾಟಿಂಗ್ ಆಧಾರಿಸಿ ಬಾಲಿವುಡ್‌ನ ಕೆಲವರು ಡ್ರಗ್ಸ್ ಸೇವೆನೆ ಬಗ್ಗೆ ಸಂದೇಶ ವಿನಿಮಯ ಮಾಡಿಕೊಂಡಿರುವುದು ಸ್ಪಷ್ಟವಾಗಿತ್ತು. ಈ ಸಂಬಂಧ ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿದ್ದರು. ಈಕೆ ನೀಡಿದ ಸುಳಿವಿನ ಆಧಾರದಲ್ಲಿ ಡ್ರಗ್ ಪೂರೈಕೆ ಮಾಡುತ್ತಿದ್ದ ಹಲವರನ್ನು ಬಂಧಿಸಲಾಗಿದೆ.