ಕೋಲ್ಕತ್ತಾ:ರಾಜ್ಯಗಳ ಕೊರೊನಾ ಪರಿಸ್ಥಿತಿ ತಿಳಿಯಲು ಪ್ರಧಾನಿ ಮೋದಿ ಇಂದು ಮತ್ತು ನಾಳೆ ಅಂದರೆ ಬುಧವಾರ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಮೋದಿ ವಿಡಿಯೋ ಕಾನ್ಫರೆನ್ಸ್: ಸಿಎಂ ಮಮತಾ ಬ್ಯಾನರ್ಜಿಗಿಲ್ಲ ಅವಕಾಶ!
ಇಂದು ಮತ್ತು ನಾಳೆ ದೇಶದ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ ನಡೆಸಲಿದ್ದಾರೆ. ಆದರೆ, ಈ ಸಂವಾದದಲ್ಲಿ ಭಾಗವಹಿಸುವವರ ಹೆಸರುಗಳ ಲಿಸ್ಟ್ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೆಸರು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಡಿಯೋ ಕಾನ್ಫರೆನ್ಸ್ ಎರಡು ಹಂತಗಳಲ್ಲಿ ನಡೆಯಲಿದ್ದು, ಈ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ನಡೆಯುವ ಸಂವಾದದಲ್ಲಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಮೂಲಗಳ ಪ್ರಕಾರ, ಪಿಎಂ ಮೋದಿ ಅವರೊಂದಿಗೆ ಸಂವಾದ ನಡೆಸುವವರ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿಯವರ ಹೆಸರಿಲ್ಲ ಎಂದು ತಿಳಿದು ಬಂದಿದೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಕೊರೊನಾ ಪರಿಸ್ಥಿತಿ, ನಿಯಂತ್ರಣದ ಕುರಿತು ಪ್ರಧಾನಿ ಮೋದಿ ಪದೇ ಪದೆ ಎಲ್ಲ ರಾಜ್ಯಗಳ ಸಿಎಂಗಳೊಟ್ಟಿಗೆ ವಿಡಿಯೊ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಆದರೆ, ಈ ಹಿಂದೆ ಕೂಡ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಜೊತೆ ಸಂವಾದ ನಡೆಸಲು ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಜೊತೆಗೆ ಆ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಹಿಂದೊಮ್ಮೆ ಪಿಎಂ ಜೊತೆ ವಿಡಿಯೋ ಕಾನ್ಫರೆನ್ಗೆ ಹಾಜರಾಗದೇ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಸಂವಾದದಲ್ಲಿ ಭಾಗವಹಿಸಲು ಕಳುಹಿಸಿದ್ದರು.