ರಂಗರೆಡ್ಡಿ(ತೆಲಂಗಾಣ):ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಜ್ಯಸಭಾ ಸಂಸದ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ರಚಿಸಿ ಜನರಿಂದ ಹಣವನ್ನು ಪೀಕಲು ಯತ್ನಿಸಿದ ಬಾಲಾಪರಾಧಿಯನ್ನು ಉತ್ತರಪ್ರದೇಶದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ಪೊಲೀಸರ ಅಧಿಕೃತ ಪ್ರಕಟಣೆಯ ಪ್ರಕಾರ, 17 ವರ್ಷದ ಬಾಲಕ ಉತ್ತರಪ್ರದೇಶದ ಮಥುರಾ ಜಿಲ್ಲೆಯ ಬ್ರಹ್ಮನಾನ್ನ ಗಾಂವ್ ಮಂದೌರ ಗೋವರ್ಧನ್ ಮೂಲದವನು.
"ಬಾಲಾಪರಾಧಿ ಜೋಗಿನಿಪಲ್ಲಿಯ ಪ್ರೊಫೈಲ್ ವಿವರಗಳನ್ನು ಫೇಸ್‌ಬುಕ್ ಮೂಲಕ ಗಮನಿಸಿದ್ದಾನೆ. ನಂತರ ಅವರ ಹೆಸರು ಮತ್ತು ಹಿನ್ನೆಲೆ ಬಳಸಿಕೊಂಡು ಅವರ ಅನುಯಾಯಿಗಳಿಂದ ಸುಲಭವಾಗಿ ಹಣ ಸಂಪಾದಿಸುವ ಯೋಜನೆ ರೂಪಿಸಿದ್ದಾನೆ. ಅವನು ಜೋಗಿಪಲ್ಲಿಯವರ ಫೋಟೋ ಬಳಸಿ ಒಬ್ಬ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ನಂತರ ಸಂಸದರಂತೆಯೇ ನಟಿಸಿ ಮಧ್ಯಪ್ರದೇಶದ ಭೋಪಾಲ್‌ನ ಆಸ್ಪತ್ರೆ ಐಸಿಯುನಲ್ಲಿರುವ ತನ್ನ(ಸಂಸದರ) ಸ್ನೇಹಿತನ ರಕ್ತ ಸಂಬಂಧಿಯ ವೈದ್ಯಕೀಯ ವೆಚ್ಚವನ್ನು ಪೂರೈಸಲು 50,000 ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲು ಕೇಳಿಕೊಂಡಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.
ಬಾಲಾಪರಾಧಿಯ ವಂಚನೆಗೆ ಗುರಿಯಾದ ವ್ಯಕ್ತಿ ಹಣ ವರ್ಗಾಯಿಸಿದ್ದು, ಮೊಸದ ಅರಿವಾಗುತ್ತಿದ್ದಂತೆ ಆಗಸ್ಟ್ 25ರಂದು ದೂರು ದಾಖಲಿಸಿದ್ದಾನೆ. ದೂರಿನ ಪ್ರಕಾರ ಬಾಲಾಪರಾಧಿಯು ಗೂಗಲ್ ಪೇ ಸಂಖ್ಯೆಗಳನ್ನು ನೀಡುವ ಮೂಲಕ ಹಣವನ್ನು ಕೇಳುತ್ತಿದ್ದ. ಹಾಗೂ ಈ ವೇಳೆ ಹಿಂದಿ ಭಾಷೆಯಲ್ಲಿ ಚಾಟ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.