ವಾಷಿಂಗ್ಟನ್:ಕೊರೊನಾ ಸಾಂಕ್ರಾಮಿಕ ಮಧ್ಯೆ ಆನ್ಲೈನ್ ಶಿಕ್ಷಣ ಕೈಗೊಂಡರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ರದ್ದು ಮಾಡುವುದಾಗಿ ಈ ಹಿಂದೆ ಟ್ರಂಪ್ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ವಿವಾದಾತ್ಮಕ ಆದೇಶವನ್ನ ಅಮೆರಿಕ ಸರ್ಕಾರ ಹಿಂಪಡೆದುಕೊಂಡಿದೆ ಎಂದು ದಿ ಹಿಲ್ ವರದಿ ಮಾಡಿದೆ.
ಇಲ್ಲಿನ ಹಾರ್ವರ್ಡ್ ಹಾಗೂ ಎಂಐಟಿ ಸಂಸ್ಥೆಯಲ್ಲಿ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡು ಸಂಸ್ಥೆಗಳು ಟ್ರಂಪ್ ನೀತಿ ವಿರುದ್ಧ ಮೊಕದ್ದಮೆ ಹೂಡಿತ್ತು. ಬಳಿಕ 17 ರಾಜ್ಯಗಳ ಒಕ್ಕೂಟ ಹಾಗೂ ಕ್ಯಾಲಿಫೋರ್ನಿಯಾದ ಕೆಲ ಕಾಲೇಜುಗಳು ಟ್ರಂಪ್ ಸರ್ಕಾರದ ವಿರುದ್ಧ ಕೇಸ್ ದಾಖಲಿಸಿದ್ದವು. ಈ ಎಲ್ಲ ಬೆಳವಣಿಗೆ ಬಳಿಕ ಟ್ರಂಪ್ ಸರ್ಕಾರ ಹೇಳಿಕೆ ಹಿಂಪಡೆದಿದೆ.
ಅಮೆರಿಕನ್ ವಿಶ್ವವಿದ್ಯಾಲಯದ ಆನ್ಲೈನ್ ಕೋರ್ಸ್ಗೆ ಸೇರಿದ ವಿದ್ಯಾರ್ಥಿಗಳ ವೀಸಾ ರದ್ದು ಮಾಡಬಾರದು ಎಂದು ಈ ಹಿಂದೆ ಯುಎಸ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ವಲಸೆ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ಗೆ ನಿರ್ದೇಶನ ನೀಡಿತ್ತು. ಆದರೆ, ಟ್ರಂಪ್ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊರಹಾಕಲು ಮಾಡಿರುವ ಪಿತೂರಿ. ಇದು ಕಾನೂನು ಬಾಹಿರ ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು ಕಳೆದ ವಾರ ನಡೆದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಗ್ಲಾ ಮತ್ತು ರಾಜಕೀಯ ವ್ಯವಹಾರಗಳ ಯುಎಸ್ ಅಂಡರ್ ಸೆಕ್ರೆಟರಿ ಡೇವಿಡ್ ಹೇಲ್ ನಡುವಿನ ಮಾತುಕತೆಯಲ್ಲಿ ಎಫ್ 1 ವೀಸಾ ಬಗ್ಗೆ ಭಾರತ, ಅಮೆರಿಕಕ್ಕೆ ತನ್ನ ಕಳವಳವನ್ನ ವ್ಯಕ್ತಪಡಿಸಿತ್ತು.