ನವದೆಹಲಿ: ಸ್ಥಳೀಯ ಕೋವಿಡ್ -19 ಲಸಿಕೆಯನ್ನು ಆಗಸ್ಟ್ 15ರ ಒಳಗೆ ತರುವ ಭಾರತೀಯ ವೈದ್ಯ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭದಲ್ಲೇ ಅಡ್ಡಿಯೊಂದು ಎದುರಾಗಿದೆ. ಒಟ್ಟಾರೆ 12 ಕ್ಲಿನಿಕಲ್ ಸೈಟ್‌ಗಳ ಪೈಕಿ ಕೇವಲ ಐದಕ್ಕೆ ಮಾತ್ರವೇ ನೈತಿಕ ಸಮಿತಿಗಳಿಂದ ಅನುಮೋದನೆ ದೊರೆತಿದೆ.
ವರದಿಗಳ ಪ್ರಕಾರ, ಇನ್ನೂ ಏಳು ಕ್ಲಿನಿಕಲ್ ಸೈಟ್‌ಗಳಿಗೆ ಅನುಮೋದನೆಯನ್ನು ಸಂಬಂಧಪಟ್ಟ ನೈತಿಕ ಸಮಿತಿಗಳು ನೀಡಿಲ್ಲ. ಏಮ್ಸ್ ಮತ್ತು ವಿಶಾಖಪಟ್ಟಣಂ ಮೂಲದ ಕಿಂಗ್ ಜಾರ್ಜ್ ಆಸ್ಪತ್ರೆಯ ನೈತಿಕ ಸಮಿತಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಅನುಮೋದನೆ ನೀಡಲು ಹಿಂಜರಿಯುತ್ತವೆ. ಪ್ರಯೋಗಗಳಿಗೆ ಸಲ್ಲಿಸಿದ ಪ್ರೋಟೋಕಾಲ್‌ನಲ್ಲಿ ವ್ಯತ್ಯಾಸಗಳು ಕಂಡುಬಂದ ಬಳಿಕ ಈ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗುತ್ತಿದೆ.
ನೈತಿಕ ಸಮಿತಿಗಳ ಅನುಮೋದನೆ ಇಲ್ಲದೆ ಪ್ರಯೋಗಗಳನ್ನು ಆರಂಭಿಸಲು ಸಾಧ್ಯವಿಲ್ಲ. ಗಿಲ್ಲೂರ್ಕರ್ ಆಸ್ಪತ್ರೆ ನೈತಿಕ ಸಮಿತಿ (ನಾಗ್ಪುರ), ಸಾಂಸ್ಥಿಕ ನೈತಿಕ ಸಮಿತಿ, (ಏಮ್ಸ್-ಪಾಟ್ನಾ), ಸಾಂಸ್ಥಿಕ ನೈತಿಕ ಸಮಿತಿ, (ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆ-ಒಡಿಶಾ), ಸಾಂಸ್ಥಿಕ ನೈತಿಕ ಸಮಿತಿ, ಎಸ್‌ಆರ್‌ಎಂ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ತಮಿಳುನಾಡು) ಮತ್ತು ಐದು ನೈತಿಕ ಸಮಿತಿ ನಿಮ್ಸ್ ಇನ್ಸ್ಟಿಟ್ಯೂಶನಲ್ ಎಥಿಕ್ಸ್ ಕಮಿಟಿ (ಹೈದರಾಬಾದ್) ಈಗಲೂ ಪ್ರೋಟೋಕಾಲ್ ಅನ್ನು ಪರಿಶೀಲಿಸುತ್ತಿವೆ.