ಹೈದರಾಬಾದ್:ಸಚಿವಾಲಯದ ಆವರಣದಲ್ಲಿ ನೆಲಸಮಗೊಳಿಸಲಾದ ಎರಡು ಮಸೀದಿಗಳ ಪುನರ್ನಿರ್ಮಾಣ ಮಾಡುವುದನ್ನು ತಕ್ಷಣವೇ ಘೋಷಿಸುವಂತೆ ಬೇಡಿಕೆಯಿಟ್ಟಿರುವ ತೆಲಂಗಾಣದ ಮುಸ್ಲಿಂ ಮುಖಂಡರು, ತಮ್ಮ ತಾಳ್ಮೆ ಪರೀಕ್ಷಿಸಬಾರದೆಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ಗೆ ಎಚ್ಚರಿಕೆ ನೀಡಿದ್ದಾರೆ.
ತಾಳ್ಮೆ ಪರೀಕ್ಷಿಸದಿರಿ.. ತೆಲಂಗಾಣ ಸಿಎಂಗೆ ಮುಸ್ಲಿಂ ಮುಖಂಡರ ಎಚ್ಚರಿಕೆ - ಮಸೀದಿಗಳ ಪುನರ್ನಿರ್ಮಾಣ
ಮಸೀದಿಗಳನ್ನು ನೆಲಸಮ ಮಾಡಿ ಮೂರು ವಾರಗಳು ಕಳೆದರೂ ಅವುಗಳ ಪುನರ್ನಿರ್ಮಾಣದ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಸಿಎಂ ಚಂದ್ರಶೇಖರ್ ರಾವ್ ವಿರುದ್ಧ ಮುಸ್ಲಿಂ ಮುಖಂಡರು ತಿರುಗಿ ಬಿದ್ದಿದ್ದಾರೆ.
400 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಸಂಕೀರ್ಣವನ್ನು ನಿರ್ಮಿಸಲು ಮಂದಿರ, ಮಸೀದಿಗಳು ಸೇರಿದಂತೆ ಹಳೆಯ ಸಚಿವಾಲಯದ ಆವರಣದಲ್ಲಿದ್ದ ಎಲ್ಲಾ 10 ಬ್ಲಾಕ್ಗಳನ್ನು ತೆಲಂಗಾಣ ಸರ್ಕಾರ ನೆಲಸಮ ಮಾಡಿತ್ತು. ಆದರೆ ಮೂರು ವಾರಗಳು ಕಳೆದರೂ ಅವುಗಳ ಪುನರ್ನಿರ್ಮಾಣದ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಅಸಮಾಧಾನ ಭುಗಿಲೆದ್ದಿದೆ.
ಮುಖ್ಯಮಂತ್ರಿಗಳು ಈ ಕುರಿತು ವಿಷಾದ ವ್ಯಕ್ತಪಡಿಸಿದರೆ, ಭರವಸೆ ನೀಡಿದರೆ ಮಾತ್ರ ಸಾಕಾಗುವುದಿಲ್ಲ. ಎರಡೂ ಮಸೀದಿಗಳನ್ನು ಅವುಗಳ ಮೂಲ ಸ್ಥಳಗಳಲ್ಲೇ ಪುನರ್ನಿರ್ಮಿಸಬೇಕು. ಸರ್ಕಾರದ ಮೌನವು ಮಸೀದಿಗಳ ಪಾವಿತ್ರ್ಯತೆ ಮತ್ತು ಮುಸ್ಲಿಮರ ಭಾವನೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಇದು ಹೀಗೆ ಮುಂದುವರೆದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಯುನೈಟೆಡ್ ಮುಸ್ಲಿಂ ಫೋರಂ (ಎಂಯುಎಫ್) ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದೆ.