ಮುಂಬೈ:ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರಬಿದ್ದು ಇಂದಿಗೆ 10 ದಿನ ಕಳೆದರೂ ಇಲ್ಲಿಯವರೆಗೆ ಸರ್ಕಾರ ರಚನೆಯಾಗಿಲ್ಲ. ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದ ಶಿವಸೇನೆ ಮತ್ತು ಬಿಜೆಪಿ ಇನ್ನೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ.
ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಭಿನ್ನಾಬಿಪ್ರಾಯಗಳಿದ್ದು, ಇಲ್ಲಿಯವರೆಗೂ ಉಭಯ ನಾಯಕರು ಕುಳಿತು ಚರ್ಚೆ ನಡೆಸಿಲ್ಲ. ಹೀಗಾಗಿ ಸರ್ಕಾರ ರಚನೆ ವಿಚಾರ ಕಗ್ಗಂಟಾಗಿಯೇ ಉಳಿದಿದೆ.
ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್ ಮಾತನಾಡಿ, ಶಿವಸೇನೆ ಮತ್ತು ಬಿಜೆಪಿ ನಡುವೆ ಇಲ್ಲಿಯವರೆಗೆ ಸರ್ಕಾರ ರಚನೆ ಮಾಡುವ ಮಾತುಕತೆ ನಡೆದಿಲ್ಲ. ಒಂದು ವೇಳೆ ಈ ಬಗ್ಗೆ ಚರ್ಚೆ ನಡೆದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತ್ರ ಎಂದು ಹೇಳಿದ್ದಾರೆ.
5 ವರ್ಷದ ಸರ್ಕಾರದ ಅವಧಿಯಲ್ಲಿ ಶಿವಸೇನೆ ಮತ್ತು ಬಿಜೆಪಿ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಶಿವಸೇನೆ ಇಂಗಿತ ವ್ಯಕ್ತಪಡಿಸಿದೆ. ಆದ್ರೆ, ಬಿಜೆಪಿ ಈ ಬಗ್ಗೆ ನಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ.
ಇತ್ತ ಎನ್ಸಿಪಿ ಕೂಡಾ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್, ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಹೇಳಿದ್ದರೂ, ಎನ್ಸಿಪಿಯ ಇತರೆ ನಾಯಕರು ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.