ಲಕ್ನೊ: ಮಾ.13 ರಿಂದ 15 ರವರೆಗೆ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲೀಘಿ ಜಮಾತ್ನಲ್ಲಿ ಉತ್ತರ ಪ್ರದೇಶದ 18 ಜಿಲ್ಲೆಗಳ ಜನ ಪಾಲ್ಗೊಂಡಿದ್ದರು ಎಂಬ ಆಘಾತಕಾರಿ ವರದಿಗಳ ಹಿನ್ನೆಲೆಯಲ್ಲಿ ಈ ಎಲ್ಲ 18 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ತಬ್ಲೀಘಿ ಜಮಾತ್ನಲ್ಲಿ ದೇಶ ವಿದೇಶಗಳ ಸುಮಾರು 2000 ಸಾವಿರ ಜನ ಭಾಗವಹಿಸಿದ್ದು, ಇವರಲ್ಲಿ ಅನೇಕರಿಗೆ ಕೋವಿಡ್-19 ಸೋಂಕು ತಗುಲಿದ್ದು ದೃಢಪಟ್ಟಿದೆ.
ನಿಜಾಮುದ್ದೀನ್ನಲ್ಲಿ ನಡೆದ ತಬ್ಲೀಘಿ ಜಮಾತ್ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಮರಳಿದ್ದ ತೆಲಂಗಾಣದ 6 ಜನ ಈಗಾಗಲೇ ಕೋವಿಡ್ನಿಂದ ಮೃತ ಪಟ್ಟಿರುವುದರಿಂದ ಎಲ್ಲೆಡೆ ಭೀತಿ ಆವರಿಸುವಂತಾಗಿದೆ.
ಹೈ ಅಲರ್ಟ್ ಘೋಷಿಸಲಾಗಿರುವ 18 ಜಿಲ್ಲೆಗಳಿಂದ ಯಾರ್ಯಾರು ತಬ್ಲೀಘಿ ಜಮಾತ್ನಲ್ಲಿ ಭಾಗವಹಿಸಿದ್ದರು ಎಂಬುದನ್ನು ತಕ್ಷಣ ಪತ್ತೆ ಮಾಡುವಂತೆ ಆಯಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಕುರಿತು ಮಂಗಳವಾರ ಸಂಜೆಯೊಳಗೆ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಕ್ರೈಂ ವಿಭಾಗದ ಎಸ್ಪಿ ಅಜಯ್ ಶಂಕರ ರಾಯ್ ತಿಳಿಸಿದ್ದಾರೆ.