ನವದೆಹಲಿ/ಬೆಳಗಾವಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಕೊರೊನಾ ಸೋಂಕಿನಿಂದ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ.
ಸಂಸದರ ಪಾರ್ಥಿವ ಶರೀರ ಬೆಳಗಾವಿಗೆ ತಂದು ಇಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂಬುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಬಯಕೆಯಾಗಿತ್ತು. ಈ ನಿಟ್ಟಿನಲ್ಲಿ ಅಂಗಡಿ ಅವರ ಬೀಗರಾಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರಯತ್ನ ನಡಿಸಿದ್ದಾರೆ. ರಾಜ್ಯ ಸರ್ಕಾರ ಸಹ ಪ್ರಯತ್ನ ನಡೆಸಿತ್ತು. ಆದರೆ ಕೋವಿಡ್-19 ನಿಯಮಾವಳಿ ಅನ್ವಯ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ದೊರೆಯುತ್ತಿಲ್ಲ. ಹೀಗಾಗಿ ದೆಹಲಿಯ ದ್ವಾರಕಾ ಸೆಕ್ಟರ್ 24ರಲ್ಲಿ ಸಂಜೆ 4 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.