ಹೈದರಾಬಾದ್(ತೆಲಂಗಾಣ):ನವಜಾತ ಹೆಣ್ಣು ಮಗುವನ್ನು ನಾಯಿಯೊಂದು ಹೊತ್ತು ಒಯ್ಯುತ್ತಿದ್ದ ಘಟನೆ ನಗರದ ಎಲ್.ಬಿ ನಗರದಲ್ಲಿ ನಡೆದಿದೆ.
ಬೀದಿ ನಾಯಿ ಹೊತ್ತೊಯ್ದ ಮಗುವಿನ ಶವ ಎಲ್ಬಿ ನಗರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವನ್ನು ಬೀದಿ ನಾಯಿಯೊಂದು ಎಳೆದೊಯ್ಯುತ್ತಿತ್ತು. ಅದೇ ದಾರಿಯಲ್ಲಿ ಬಂದ ದ್ವಿಚಕ್ರ ವಾಹನ ಸವಾರರು ಈ ದೃಶ್ಯವನ್ನು ಕಂಡಿದ್ದಾರೆ. ಗಾಬರೊಗೊಂಡ ಅವರು ಗಟ್ಟಿಯಾಗಿ ಕೂಗಿಕೊಂಡಿದ್ದಾರೆ. ಬೆದರಿದ ನಾಯಿ ಆ ಮಗುವಿನ ದೇಹವನ್ನು ಅಲ್ಲೇ ಬಿಟ್ಟು ಓಡಿ ಹೋಗಿದೆ.
ಮಗುವನ್ನು ಯಾರೋ ರಸ್ತೆ ಬದಿ ಬಿಸಾಕಿ ಹೋಗಿರಬಹುದು. ಇಲ್ಲಿ ಪಕ್ಕದಲ್ಲಿ ಆಸ್ಪತ್ರೆಯೊಂದು ಇರುವ ಕಾರಣ ಯಾರೋ ಈ ಕೃತ್ಯ ಮಾಡಿದ್ದಾರೆ ಎಂದು ದಾರಿಹೋಕರು ತಿಳಿಸಿದ್ದಾರೆ.
ಇನ್ನು ಬೈಕ್ ಸವಾರರು ಕೂಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಗುವಿನ ಶವವನ್ನು ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.