ನವದೆಹಲಿ:ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ದೆಹಲಿ ಕಾಂಗ್ರೆಸ್ ಘಟಕ ಮುಖ್ಯಸ್ಥ ಸುಭಾಷ್ ಚೋಪ್ರಾ ಮತ್ತು ದೆಹಲಿ ಉಸ್ತುವಾರಿ ಪಿ ಸಿ ಚಾಕೊ ನೀಡಿದ್ದ ರಾಜೀನಾಮೆಯನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಗೀಕರಿಸಿದ್ದಾರೆ.
ಬಿಹಾರದ ಉಸ್ತುವಾರಿ ವಹಿಸಿರುವ ಶಕ್ತಿಸಿಂಗ್ ಗೋಹಿಲ್ ಅವರಿಗೆ ದೆಹಲಿಯ ಮಧ್ಯಂತರ ಉಸ್ತುವಾರಿ ನೀಡಲಾಗಿದೆ ಎಂದು ಪಕ್ಷ ಅಧಿಕೃತ ಪ್ರಕಟಣೆ ತಿಳಿಸಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ 2ನೇ ಬಾರಿಗೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ರಾಷ್ಟ್ರೀಯ ಪಕ್ಷದ ಮುಖಭಂಗಕ್ಕೆ ಕಾರಣವಾಗಿದೆ.
ಕಾಂಗ್ರೆಸ್ 66 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. 63 ರಲ್ಲಿ ಅವರ ಠೇವಣಿಯನ್ನು ಕಳೆದುಕೊಂಡಿದೆ. ಅಲ್ಲದೆ ಆರ್‌ಜೆಡಿಗೆ ನಾಲ್ಕು ಸ್ಥಾನಗಳನ್ನು ನೀಡಿತ್ತು ಆ ಅಭ್ಯರ್ಥಿಗಳು ಸಹ ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ದೆಹಲಿ ಘಟಕದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಸುಭಾಷ್ ಚೋಪ್ರಾ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಫಲಿತಾಂಶ ಬಂದ ಕೂಡಲೇ ರಾಜೀನಾಮೆ ನೀಡಿದ್ದರು. ಐದು ವರ್ಷಗಳಿಂದ ದೆಹಲಿಯ ಉಸ್ತುವಾರಿ ವಹಿಸಿರುವ ಚಾಕೊ ಕೂಡ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದರು.
ಆಮ್ ಆದ್ಮಿ ಪಕ್ಷದ ಅಧಿಕಾರಕ್ಕೆ ಬರುವ ಮೊದಲು ಸತತ 15 ವರ್ಷಗಳ ಕಾಲ ಕಾಂಗ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದಲ್ಲಿತ್ತು. ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಎಎಪಿ 70ರ ಪೈಕಿ 62 ಸ್ಥಾನಗಳನ್ನು ಪಡೆದರೆ, ಬಿಜೆಪಿ ಎಂಟರಲ್ಲಿ ಗೆಲುವು ಸಾಧಿಸಿದೆ.